ಹಳಸಿದ ಭಾರತ-ಅಮೆರಿಕ ಸಂಬಂಧ: ಜಾನ್ ಕೆರಿ ಕಳವಳ

ಜಾನ್ ಕೆರಿ |PC : scroll.in
ಹೊಸದಿಲ್ಲಿ, ಆ. 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಂಥ ಮಿತ್ರದೇಶಗಳನ್ನು ದೂರವಿಡುತ್ತಿರುವ ಬಗ್ಗೆ ಆ ದೇಶದ ಮಾಜಿ ವಿದೇಶ ಕಾರ್ಯದರ್ಶಿ ಜಾನ್ ಕೆರಿ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ-ಅಮೆರಿಕ ಸಂಬಂಧದಲ್ಲಿ ಬಿರುಕು ಮೂಡಿರುವುದು ದುರದೃಷ್ಟಕರ ಎಂಬುದಾಗಿ ಅವರು ಬಣ್ಣಿಸಿದರು. ಪ್ರಾಮಾಣಿಕ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡದೆ ಗಡುವುಗಳನ್ನು ನೀಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಶುಕ್ರವಾರ ನಡೆದ ‘‘ಇಟಿ ವರ್ಲ್ಡ್ ಲೀಡರ್ಸ್ ಫೋರಮ್’’ನಲ್ಲಿ ಮಾತನಾಡಿದ ಅವರು ಹೇಳಿದರು.
‘‘ಅಧ್ಯಕ್ಷ ಟ್ರಂಪ್ ಮತ್ತು ಭಾರತೀಯ ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಘರ್ಷವು ದುರದೃಷ್ಟಕರವಾಗಿದೆ. ಈ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಸರ್ವಸಮ್ಮತ ಪರಿಹಾರವೊಂದನ್ನು ಕಂಡು ಹಿಡಿಯಲು ಪ್ರಾಮಾಣಿಕ ರಾಜತಾಂತ್ರಿಕ ಪ್ರಯತ್ನವನ್ನು ಮಾಡದೆ, ಜನರಿಗೆ ಯಾವಾಗಲೂ ಗಡುವುಗಳನ್ನು ನೀಡುವ ಮೂಲಕ ಶ್ರೇಷ್ಠ ದೇಶಗಳು ಶ್ರೇಷ್ಠತೆಯನ್ನು ಪ್ರದರ್ಶಿಸಿದಂತೆ ಆಗುವುದಿಲ್ಲ’’ ಎಂದು ಜಾನ್ ಕೆರಿ ಅಭಿಪ್ರಾಯಪಟ್ಟರು.
ಒಬಾಮ ಆಡಳಿತದ ವೇಳೆ, ಸಹಕಾರ ಮತ್ತು ಪರಸ್ಪರ ಗೌರವದ ಮೂಲಕ ಮಾತುಕತೆಗಳನ್ನು ನಡೆಸಲಾಗುತ್ತಿತ್ತು ಎಂದು ಅಂದಿನ ಸರಕಾರದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಕೆರಿ ಹೇಳಿದರು. ಆದರೆ ಈಗ, ‘‘ಅಪ್ಪಣೆ ಕೊಡುವುದು, ಒತ್ತಡ ಹಾಕುವುದು ಮತ್ತು ಬೆದರಿಸುವುದು ಸ್ವಲ್ಪ ಹೆಚ್ಚೇ ನಡೆಯುತ್ತಿದೆ’’ ಎಂದು ಅವರು ಅಭಿಪ್ರಾಯಪಟ್ಟರು.
ರಶ್ಯದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಭಾರತದ ಮೇಲೆ ಅಮೆರಿಕವು ಹೆಚ್ಚುವರಿ ಸುಂಕ ಹೇರಿದ ಬಳಿಕ, ಇತ್ತೀಚಿನ ವಾರಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧವು ಹಳಸಿದೆ. ಈಗ ಭಾರತೀಯ ಸರಕುಗಳ ಮೇಲಿನ ಅಮೆರಿಕ ಸುಂಕವು 50 ಶೇಕಡವನ್ನೂ ಮೀರಿದೆ.
ಭಾರತ ಮತ್ತು ಅಮೆರಿಕ ತಮ್ಮ ವಾಣಿಜ್ಯ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಎಂಬ ಭರವಸೆಯನ್ನು ಕೆರಿ ವ್ಯಕ್ತಪಡಿಸಿದರು.







