ರಾಜಸ್ಥಾನದ ಡಿಸಿಎಂ ಕುರಿತು ಮಾನಹಾನಿಕರ ವರದಿ: ಇಬ್ಬರು ಪತ್ರಕರ್ತರ ಬಂಧನ

ದಿಯಾ ಕುಮಾರಿ | Photo Credit : PTI
ಜೈಪುರ, ಅ. 18: ರಾಜಸ್ಥಾನದ ಉಪ ಮುಖ್ಯಮಂತ್ರಿ ದಿಯಾ ಕುಮಾರಿ ಕುರಿತು ಸುಳ್ಳು ಹಾಗೂ ಮಾನಹಾನಿಕರ ವರದಿಗಳನ್ನು ಪ್ರಕಟಿಸಿದ ಆರೋಪದಲ್ಲಿ ಹಿಂದಿ ಸುದ್ದಿ ಸಂಸ್ಥೆ ‘ದ ಸೂತ್ರ’ದ ಇಬ್ಬರು ಪತ್ರಕರ್ತರನ್ನು ರಾಜಸ್ಥಾನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
‘ದ ಸೂತ್ರ’ದ ಮುಖ್ಯ ಸಂಪಾದಕ ಆನಂದ್ ಪಾಂಡೆ ಹಾಗೂ ನಿರ್ವಹಣಾ ಸಂಪಾದಕ ಹರೀಶ್ ದಿವೇಕರ್ ಅವರನ್ನು ಮಧ್ಯಪ್ರದೇಶದ ಭೋಪಾಲದಲ್ಲಿರುವ ಸಂಸ್ಥೆಯ ಕಚೇರಿಯಿಂದ ಪೊಲೀಸರು ಬಂಧಿಸಿದ್ದಾರೆ.
ನರೇಂದ್ರ ಸಿಂಗ್ ರಾಥೋಡ್ ಎಂಬವರು ದಾಖಲಿಸಿದ ದೂರಿನ ಆಧಾರದಲ್ಲಿ ಆನಂದ ಪಾಂಡೆ ಹಾಗೂ ಹರೀಶ್ ದಿವೇಕರ್ ವಿರುದ್ಧ ಜೈಪುರದ ಕರ್ನಿ ವಿಹಾರ್ ಪೊಲೀಸ್ ಠಾಣೆಯಲ್ಲಿ ಮಾನಹಾನಿಕರ, ಸುಲಿಗೆ, ತಪ್ಪು ಮಾಹಿತಿಯ ಪ್ರಕಟಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳು, ಅಲ್ಲದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ದೂರು ದಾಖಲಾದ ಬಳಿಕ ಜೈಪುರ ಪೊಲೀಸ್ ಆಯುಕ್ತ ಬಿಜು ಜೋಸೆಫ್ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ‘‘ತನಿಖೆ ನಡೆಸಲಾಗಿದೆ. ಸಂಬಂಧಿತ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ತಾಂತ್ರಿಕ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವೆಬ್ ಸೈಟ್ ನಲ್ಲಿ ಪ್ರಕಟಿಸಲಾದ ಸುದ್ದಿಗಳು ಸತ್ಯಾಂಶವನ್ನು ಆಧರಿಸಿಲ್ಲ ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.
‘‘ದ ಸೂತ್ರ ವಾಹಿನಿಯಿಂದ ಹಾಗೂ ವೆಬ್ ಪೇಜ್ ನಿಂದ ಸುಳ್ಳು ಸುದ್ದಿಯನ್ನು ತೆಗೆಯಲು ಹಾಗೂ ಭವಿಷ್ಯದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ಆರೋಪಿಗಳು 5 ಕೋ. ರೂ. ಬೇಡಿಕೆ ಇರಿಸಿದ್ದರು ಎಂಬುದನ್ನು ತನಿಖೆ ಬಹಿರಂಗಗೊಳಿಸಿದೆ’’ ಎಂದು ಹೇಳಿಕೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ‘ದ ಸೂತ್ರ’ ಪತ್ರಕರ್ತರ ಬಂಧನ ಸ್ವತಂತ್ರ್ಯ ಪತ್ರಿಕೋದ್ಯಮವನ್ನು ಬೆದರಿಸುವ ಹಾಗೂ ಮೌನಗೊಳಿಸುವ ಪ್ರಯತ್ನ ಎಂದು ಹೇಳಿದೆ.







