ದಿಲ್ಲಿ | ಜಾಮೀನು ನೀಡಲು ಲಂಚ ಕೇಳಿದ್ದ ಆರೋಪ; ನ್ಯಾಯಾಧೀಶರ ವರ್ಗಾವಣೆ

ಸಾಂದರ್ಭಿಕ ಚಿತ್ರ (credit: ANI)
ಹೊಸದಿಲ್ಲಿ: ಆರೋಪಿಗಳಿಗೆ ಜಾಮೀನು ನೀಡಲು ಲಂಚ ಕೇಳಿದ್ದರು ಎಂದು ದಿಲ್ಲಿ ಸರಕಾರದ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಆರೋಪಿಸಿರುವ ಇಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರನ್ನು ದಿಲ್ಲಿ ಉಚ್ಚ ನ್ಯಾಯಾಲಯವು ವರ್ಗಾವಣೆಗೊಳಿಸಿದೆ.
ಈ ವರ್ಷದ ಜ.29ರಂದು ಕಾನೂನು,ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಎಸಿಬಿಯು ಆರೋಪಿಗಳಿಗೆ ಜಾಮೀನು ನೀಡಲು ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಮತ್ತು ಅಹಲಮದ್ (ಗುಮಾಸ್ತ ಅಥವಾ ಅಧಿಕಾರಿ) ವಿರುದ್ಧ ತನಿಖೆ ಆರಂಭಿಸಲು ಅನುಮತಿಯನ್ನು ಕೋರಿತ್ತು.
ಇಲಾಖೆಯು ಎಸಿಬಿಯ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ರವಾನಿಸಿತ್ತು. ಫೆ.14ರಂದು ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್,ಎಸಿಬಿ ಬಳಿ ವಿಶೇಷ ನ್ಯಾಯಾಧೀಶರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿತ್ತು. ಆದಾಗ್ಯೂ ತನಿಖೆಯನ್ನು ಮುಂದುವರಿಸುವಂತೆ ಎಸಿಬಿಗೆ ಸೂಚಿಸಿದ್ದ ಅದು ನ್ಯಾಯಾಧೀಶರ ವಿರುದ್ಧ ಯಾವುದೇ ಪುರಾವೆ ಕಂಡು ಬಂದರೆ ತನ್ನನ್ನು ಮತ್ತೆ ಸಂಪರ್ಕಿಸುವಂತೆ ತಿಳಿಸಿತ್ತು.
ಮೇ 16ರಂದು ಎಸಿಬಿಯು ನ್ಯಾಯಾಲಯದ ಅಹಲಮದ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿತ್ತು.
ಮೇ 20ರಂದು ವಿಶೇಷ ನ್ಯಾಯಾಧೀಶರನ್ನು ರೌಸ್ ಅವೆನ್ಯೂ ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
2021ರಲ್ಲಿ ನಕಲಿ ಸಂಸ್ಥೆಗಳಿಗೆ ಜಿಎಸ್ಟಿ ಮರುಪಾವತಿಯನ್ನು ಮಂಜೂರು ಮಾಡಿದ್ದ ಆರೋಪದಲ್ಲಿ ಜಿಎಸ್ಟಿ ಅಧಿಕಾರಿಯೋರ್ವರ ವಿರುದ್ಧ ಎ.2023ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎಸಿಬಿ ತನ್ನ ಜ.29ರ ಪತ್ರದಲ್ಲಿ ಉಲ್ಲೇಖಿಸಿತ್ತು.
ಜಿಎಸ್ಟಿ ಅಧಿಕಾರಿ,ಮೂವರು ವಕೀಲರು,ಓರ್ವ ಚಾರ್ಟರ್ಡ್ ಅಕೌಂಟಂಟ್ ಮತ್ತು ಇಬ್ಬರು ಸರಕು ಸಾಗಣೆದಾರರು ಸೇರಿದಂತೆ 16 ಜನರನ್ನು ಎಸಿಬಿ ಬಂಧಿಸಿತ್ತು. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಿರುವ ವಿಶೇಷ ನ್ಯಾಯಾಲಯವು ತೀರ್ಪುಗಳನ್ನು ಕಾಯ್ದಿರಿಸಿದೆ.
ಡಿ.30,2024ರಂದು ಜಿಎಸ್ಟಿ ಅಧಿಕಾರಿಯ ಸಂಬಂಧಿಯೋರ್ವರು ಇಮೇಲ್ ಮೂಲಕ ಎಸಿಬಿಗೆ ಮೊದಲ ದೂರನ್ನು ಸಲ್ಲಿಸಿದ್ದರು. ನ್ಯಾಯಾಲಯದ ಅಧಿಕಾರಿಗಳು ಜಿಎಸ್ಟಿ ಅಧಿಕಾರಿಯನ್ನು ಸಂಪರ್ಕಿಸಿ ಅವರ ಜಾಮೀನಿಗಾಗಿ 85 ಲ.ರೂ.ಮತ್ತು ಇತರರ ಜಾಮೀನಿಗಾಗಿ ತಲಾ ಒಂದು ಕೋ.ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಜ.20ರಂದು ಇನ್ನೋರ್ವ ವ್ಯಕ್ತಿ ಎಸಿಬಿಗೆ ದೂರು ಸಲ್ಲಿಸಿ,ಜನವರಿ ಮೊದಲ ವಾರದಲ್ಲಿ ತನ್ನನ್ನು ಸಂಪರ್ಕಿಸಿದ್ದ ನ್ಯಾಯಾಲಯದ ಅಹಲಮದ್ ಪ್ರಕರಣದಲ್ಲಿಯ ಮೂವರು ಆರೋಪಿಗಳು ತಲಾ 15-20 ಲ.ರೂ.ಲಂಚವನ್ನು ನೀಡಿದರೆ ಅವರು ಜಾಮೀನು ಪಡೆಯಬಹುದು ಎಂದು ತನಗೆ ತಿಳಿಸಿದ್ದರು ಎಂದು ಆರೋಪಿಸಿದ್ದರು.







