ದಿಲೀಪ್ ಪರ ಒಲವು, ಸಂತ್ರಸ್ತೆ ಬಗ್ಗೆ ಅವಹೇಳನಕಾರಿ ಹೇಳಿಕೆ; ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದ ವಕೀಲೆ ಟಿ.ಬಿ. ಮಿನಿ

ನಟ ದಿಲೀಪ್ | Photo Credit : PTI
ಎರ್ನಾಕುಲಂ: ಖ್ಯಾತ ಮಲಯಾಳಂ ನಟ ದಿಲೀಪ್ ವಿರುದ್ಧದ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಪರ ವಕೀಲೆ ಟಿ.ಬಿ. ಮಿನಿ ಅವರು, ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಹನಿ ಎಂ. ವರ್ಗೀಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ಸಲ್ಲಿಸಿದ್ದಾರೆ.
ನಟಿ ಮೇಲಿನ ದಾಳಿ ಪ್ರಕರಣವನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ನ್ಯಾಯಾಲಯದಲ್ಲೇ ನಿದ್ದೆ ಮಾಡುತ್ತಿದ್ದರು ಎಂಬ ಹಾಸ್ಯಾಸ್ಪದ ಟಿಪ್ಪಣಿಗಳನ್ನು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಮಿನಿ ಅವರ ಬಗ್ಗೆ ಮಾಡಿದ ಬಳಿಕ, ಹನಿ ವರ್ಗೀಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಿನಿ ಅರ್ಜಿ ಸಲ್ಲಿಸಿದ್ದಾರೆ. ಈ ಹೇಳಿಕೆಗಳನ್ನು ಸುಳ್ಳು ಮತ್ತು ಮಾನಹಾನಿಕಾರಿಯೆಂದು ಕರೆದಿರುವ ಮಿನಿ, ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ನಟ ದಿಲೀಪ್ ಗೆ ಹನಿ ವರ್ಗೀಸ್ ಅನಗತ್ಯವಾಗಿ ಒಲವು ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 2025ರಲ್ಲಿ ನೀಡಿದ ತೀರ್ಪಿನಲ್ಲಿ ಹನಿ ವರ್ಗೀಸ್ ಅವರು ದಿಲೀಪ್ ಮತ್ತು ಇತರ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಆರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದ್ದರು. ಈ ತೀರ್ಪು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆದರೆ ಮಿನಿ ನ್ಯಾಯಾಧೀಶರ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಿರಲಿಲ್ಲ. ತೀರ್ಪು ನಿರಾಶಾದಾಯಕವಾಗಿದೆ ಎಂದು ಮಾತ್ರ ಹೇಳಿದ್ದರು.
ಫೆಬ್ರವರಿ 4ರಂದು ಹೈಕೋರ್ಟ್ ಆರು ಅಪರಾಧಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ. ಈ ಮಧ್ಯೆ ಮಿನಿ ಇದೀಗ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅರ್ಜಿಯಲ್ಲಿ ಮತ್ತಷ್ಟು ಉಲ್ಲೇಖಿಸಿರುವಂತೆ, ವಿಚಾರಣೆಯ ಆರಂಭಿಕ ಹಂತದಿಂದಲೇ ಹನಿ ವರ್ಗೀಸ್ ಅವರು ಸಂತ್ರಸ್ತೆಯ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದರು ಮತ್ತು ಪ್ರಾಸಿಕ್ಯೂಷನ್ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದರು. ಇದರ ಪರಿಣಾಮವಾಗಿ ಇಬ್ಬರು ವಿಶೇಷ ಸಾರ್ವಜನಿಕ ಅಭಿಯೋಜಕರು ರಾಜೀನಾಮೆ ನೀಡುವಂತಾಯಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹನಿ ವರ್ಗೀಸ್ ಅವರು ದಿಲೀಪ್ ಅವರಿಗೆ ತೋರಿದ ಅನಗತ್ಯ ಒಲವು ನ್ಯಾಯಾಂಗ ವ್ಯವಸ್ಥೆಯ ಗೌರವಕ್ಕೆ ಧಕ್ಕೆ ತಂದಿದೆ ಎಂದು ಮಿನಿ ಆರೋಪಿಸಿದ್ದಾರೆ.
ಸಂತ್ರಸ್ತೆ ಹಾಗೂ ಪ್ರಾಸಿಕ್ಯೂಷನ್ ಸಾಕ್ಷಿಗಳ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಹನಿ ವರ್ಗೀಸ್ ಅವರ ನಿಯಮಿತ ಅಭ್ಯಾಸವಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಇಂತಹ ವರ್ತನೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕರು ನ್ಯಾಯಾಧೀಶರಿಗೆ ನೆನಪಿಸಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ಹೇಳಲಾಗಿದೆ.
ಸೆಷನ್ಸ್ ನ್ಯಾಯಾಲಯದ ವಶದಲ್ಲಿದ್ದ ನಿರ್ಣಾಯಕ ಸಾಕ್ಷ್ಯವಾದ ಮೆಮೊರಿ ಕಾರ್ಡ್ ಅನ್ನು ಕಾನೂನುಬಾಹಿರವಾಗಿ ತಿರುಚಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಜುಲೈ 2021ರಲ್ಲಿ ಮೆಮೊರಿ ಕಾರ್ಡ್ ಹನಿ ವರ್ಗೀಸ್ ಅವರ ಪೀಠದ ಕಸ್ಟಡಿಯಲ್ಲಿದ್ದ ವೇಳೆ ಸುಮಾರು ಅರ್ಧ ಗಂಟೆಗಳ ಕಾಲ ಅದನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಮಿನಿ ಉಲ್ಲೇಖಿಸಿದ್ದಾರೆ.
ಖಾಸಗಿತನ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದಾಗ, ಹೈಕೋರ್ಟ್ ಹನಿ ವರ್ಗೀಸ್ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಆದರೆ ನ್ಯಾಯಾಧೀಶರು ಹೈಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ಕೇವಲ ಔಪಚಾರಿಕ ತನಿಖೆ ನಡೆಸಿದ್ದಾರೆ ಎಂದು ಮಿನಿ ಆರೋಪಿಸಿದ್ದಾರೆ.
“ಸುಳ್ಳು ಆರೋಪಗಳ ಮೂಲಕ ತೆರೆದ ನ್ಯಾಯಾಲಯದಲ್ಲೇ ವಕೀಲರ ಮಾನಹಾನಿ ನಡೆದಲ್ಲಿ ಸಂಬಂಧಿತ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್ ಕ್ರಮ ಕೈಗೊಳ್ಳಬಹುದು” ಎಂದು ಉಲ್ಲೇಖಿಸಿ, ಹನಿ ವರ್ಗೀಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಿನಿ ಮನವಿ ಮಾಡಿದ್ದಾರೆ.







