FACT CHECK | ಲಕ್ನೊ ಹೈಕೋರ್ಟ್ ಗೆ ಹಾಜರಾಗಿದ್ದ ರಾಹುಲ್ ಗಾಂಧಿಯವರೊಂದಿಗೆ ನ್ಯಾಯಾಧೀಶರು ಸೆಲ್ಫಿ ತೆಗೆದುಕೊಂಡಿಲ್ಲ
ನಾನು ಹಿರಿಯ ವಕೀಲ ಎಂದು ಸ್ಪಷ್ಟನೆ ನೀಡಿದ ಸೈಯದ್ ಮಹ್ಮೂದ್ ಹಸನ್

Photo: x/@zoo_bear
ಲಕ್ನೊ: ಮಾನಹಾನಿ ಪ್ರಕರಣವೊಂದರಲ್ಲಿ ನಿನ್ನೆ (ಮಂಗಳವಾರ) ಲಕ್ನೊ ನ್ಯಾಯಾಲಯವೊಂದಕ್ಕೆ ಹಾಜರಾಗಿದ್ದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ನೋಡಲು ಲಕ್ನೊ ನ್ಯಾಯಾಲಯದ ವಕೀಲರು ಮುಗಿಬಿದ್ದಿದ್ದರು. ಈ ವೇಳೆ ಸೈಯದ್ ಮಹ್ಮೂದ್ ಹಸನ್ ಎಂಬ ವಕೀಲರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಇದರ ಬೆನ್ನಿಗೇ, ಲಕ್ನೊ ನ್ಯಾಯಾಲಯದ ನ್ಯಾಯಾಧೀಶರೂ ರಾಹುಲ್ ಗಾಂಧಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾವಚಿತ್ರವೊಂದು ವೈರಲ್ ಆಗಿತ್ತು.
ಆದರೆ, ಈ ಕುರಿತು ಇಂದು ಎಕ್ಸ್ ನಲ್ಲಿ ಸ್ಪಷ್ಟೀಕರಣ ನೀಡಿರುವ ಹಿರಿಯ ವಕೀಲ ಸೈಯದ್ ಮಹ್ಮೂದ್ ಹಸನ್ ಎಂಬುವವರು, “ನಾನು ಓರ್ವ ಹಿರಿಯ ವಕೀಲನಾಗಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ರೋಮಾಂಚಿತನಾದೆ. ನಾನು ನ್ಯಾಯಾಧೀಶನಲ್ಲ. ಬದಲಿಗೆ, ಲಕ್ನೊ ಹೈಕೋರ್ಟ್/ಸಿವಿಲ್ ಕೋರ್ಟ್ ನಲ್ಲಿ ಹಿರಿಯ ವಕೀಲನಾಗಿದ್ದೇನೆ” ಎಂದು ಹೇಳಿದ್ದಾರೆ.
ಸೈಯದ್ ಮಹ್ಮೂದ್ ಹಸನ್ ರ ಈ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್, “ಈ ಚಿತ್ರದಲ್ಲಿರುವವರು ವಕೀಲ ಸೈಯದ್ ಮಹ್ಮೂದ್ ಹಸನ್ ಅವರೇ ಹೊರತು, ವಕೀಲರಲ್ಲ ಎಂಬುದು ತಿಳಿದು ಬಂದ ನಂತರ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಕೆಳಗಿನ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ. ಉಳಿದ ಬಿಜೆಪಿ ಐಟಿ ಸೆಲ್ ಸದಸ್ಯರು ತಮ್ಮ ಟ್ವೀಟ್ ಅನ್ನು ಇನ್ನೂ ಅಳಿಸಿ ಹಾಕಬೇಕಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ, ನ್ಯಾಯಾಧೀಶರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವುದು ಎಂದು ಹೇಳಲಾದ ಚಿತ್ರವೊಂದನ್ನು ಹಂಚಿಕೊಂಡಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಸೇನೆ ಮತ್ತು ವೀರ ಯೋಧರನ್ನು ಅವಮಾನಿಸಿದ್ದಕ್ಕಾಗಿ ಪ್ರಕರಣ ಎದುರಿಸುತ್ತಿರುವ ರಾಹುಲ್ ಗಾಂಧಿಯ ವಿಚಾರಣೆ ನಡೆಸಲಿರುವ ನ್ಯಾಯಾಧೀಶರು ಇವರಾಗಿದ್ದಾರೆ. ಅವರು ಈ ಕೂಡಲೇ ರಾಹುಲ್ ಗಾಂಧಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಈ ಕುರಿತ ಹೈಕೋರ್ಟ್ ಗೆ ದೂರು ಸಲ್ಲಿಸಬೇಕು” ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.







