Haryana | ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಜೂನಿಯರ್ ಹಾಕಿ ಕೋಚ್ ಬಂಧನ

Photo: Freepik.com
ರೇವರಿ (ಹರ್ಯಾಣ): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದ ಮೇಲೆ ಜೂನಿಯರ್ ಹಾಕಿ ತರಬೇತುದಾರನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ರೇವರಿ ಜಿಲ್ಲೆಯ ಗ್ರಾಮದೊಂದರ 12ನೇ ತರಗತಿಯ ವಿದ್ಯಾರ್ಥಿನಿಯು ಶುಕ್ರವಾರ ಖೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ನಾನು ಹಾಕಿ ಆಟವಾಡುತ್ತಿದ್ದೆ. ನಾಲ್ಕು ತಿಂಗಳ ಹಿಂದೆ, ನನಗೆ ಮೂರು ವರ್ಷಗಳಿಂದ ಪರಿಚಯವಿರುವ ಜೂನಿಯರ್ ಹಾಕಿ ತರಬೇತುದಾರನೊಬ್ಬ ನಾನು ಆಟವಾಡುತ್ತಿದ್ದ ಕ್ರೀಡಾಂಗಣದ ಶೌಚಾಲಯದಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ.
ಜ. 5ರಂದು ನಾನು ಗರ್ಭಿಣಿಯಾಗಿರುವುದು ಗೊತ್ತಾಯಿತು. ನಂತರ ಗರ್ಭಪಾತಕ್ಕೊಳಗಾದೆ. ನನ್ನ ಆರೋಗ್ಯ ಸ್ಥಿತಿ ವಿಷಮಗೊಂಡ ನಂತರ, ನನ್ನ ಪೋಷಕರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಆರೋಪಿಯ ವಿರುದ್ಧ ಶುಕ್ರವಾರ POSCO ಕಾಯ್ದೆ ಸೇರಿದಂತೆ ಇತರ ಸೂಕ್ತ ಕಾಯ್ದೆಗಳ ಸೆಕ್ಷನ್ಗಳಡಿ FIR ದಾಖಲಿಸಲಾಗಿದೆ ಎಂದು ರೇವರಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ರೇವರಿ ಪೊಲೀಸ್ ವಕ್ತಾರರು, “ಆರೋಪಿಯಾಗಿರುವ ಜೂನಿಯರ್ ತರಬೇತುದಾರನನ್ನು ಬಂಧಿಸಲಾಗಿದೆ. ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಆತನನ್ನು ಎರಡು ದಿನಗಳ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.







