ನ್ಯಾಯಾಂಗವು ಕಾನೂನಿನ ಆಡಳಿತದ ನಿರಂತರ ಕಾವಲುಗಾರ: ನ್ಯಾಯಮೂರ್ತಿ ಬಿ.ಆರ್. ಗವಾಯಿ

ಬಿ.ಆರ್. ಗವಾಯಿ | PC : PTI
ಹೊಸದಿಲ್ಲಿ, ನ. 8: ನ್ಯಾಯಾಂಗವು ಕಾನೂನಿನ ಆಡಳಿತದ ನಿರಂತರ ಕಾವಲುಗಾರನಾಗಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಬಿ. ಆರ್. ಗವಾಯಿ ಶನಿವಾರ ಹೇಳಿದ್ದಾರೆ. ಮೂಲಭೂತ ಹಕ್ಕುಗಳ ಅಥವಾ ಸಂವಿಧಾನದ ಇತರ ವಿಧಿಗಳ ಉಲ್ಲಂಘನೆ ನಡೆಯದ ಹೊರತು, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಹಸ್ತಕ್ಷೇಪ ಮಾಡದ ನೀತಿಯನ್ನು ಸುಪ್ರೀಂ ಕೋರ್ಟ್ ಅನುಸರಿಸುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ವಾಣಿಜ್ಯ ಮತ್ತು ಕಾರ್ಪೊರೇಟ್ ವಿಷಯಗಳಲ್ಲಿ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಖಾತರಿಪಡಿಸುವುದಕ್ಕೆ ಸುಪ್ರೀಂ ಕೋರ್ಟ್ ಒತ್ತು ನೀಡುತ್ತಾ ಬಂದಿದೆ ಮತ್ತು ವಂಚನೆಯ ಮೂಲಕ ಲಾಭ ಗಳಿಸುವುದಕ್ಕಾಗಿ ಕಾನೂನು ಅಥವಾ ಕಾರ್ಪೊರೇಟ್ ವ್ಯವಸ್ಥೆಗಳನ್ನು ದುರುಪಯೋಗಪಡಿಸುವ ಪ್ರಯತ್ನಗಳನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು.
ವಾಣಿಜ್ಯ ನ್ಯಾಯಾಲಯಗಳ ಸ್ಥಾಯಿ ಅಂತರರಾಷ್ಟ್ರೀಯ ವೇದಿಕೆಯ ಆರನೇ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
‘‘ವಾಣಿಜ್ಯ ಕಾನೂನುಗಳ ಯಾವುದೇ ವಿವರಣೆಯು ಅದರ ಉದ್ದೇಶಕ್ಕೆ ಹೊಂದಿಕೆಯಾಗಬೇಕು ಹಾಗೂ ಅದರಲ್ಲಿ ನ್ಯಾಯಪರತೆ ಮತ್ತು ಸಾರ್ವಜನಿಕ ಹಿತಾಸಕ್ತಿ ಇರಬೇಕು ಎಂಬ ತತ್ವವನ್ನು ಸುಪ್ರೀಂ ಕೋರ್ಟ್ ಪಾಲಿಸುತ್ತಿದೆ’’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳಿದರು.
ಆರ್ಥಿಕ ಸ್ವಾತಂತ್ರ್ಯ, ನಿಯಂತ್ರಣ ವ್ಯವಸ್ಥೆಯ ಶಿಸ್ತು ಮತ್ತು ನ್ಯಾಯಪರತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಸುಪ್ರೀಂ ಕೋರ್ಟ್ ನಿರಂತರವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ನುಡಿದರು.







