ಎಲ್ಗರ್ ಪರಿಷತ್ ಪ್ರಕರಣ: ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಸುಂದರೇಶ್

ಎಮ್.ಎಮ್. ಸುಂದರೇಸ್ | PC : X
ಹೊಸದಿಲ್ಲಿ, ಆ. 26: ಎಲ್ಗರ್ ಪರಿಷತ್-ಮಾವೋವಾದಿ ನಂಟು ಪ್ರಕರಣದ ಆರೋಪಿ ಸುರೇಂದ್ರ ಗದ್ಲಿಂಗ್ ರ ಜಾಮೀನು ಅರ್ಜಿ ವಿಜಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಮ್.ಎಮ್. ಸುಂದರೇಸ್ ಮಂಗಳವಾರ ಹಿಂದೆ ಸರಿದಿದ್ದಾರೆ.
ಈ ಜಾಮೀನು ಅರ್ಜಿಯ ವಿಚಾರಣೆಯು ನ್ಯಾ. ಸುಂದರೇಶ್ ರ ಮುಂದೆ ಬರುವುದಿಲ್ಲ ಎನ್ನುವುದನ್ನು ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ಹಾಕಲಾಗಿರುವ ಪ್ರಕರಣದ ಸ್ಥಿತಿಗತಿಯಲ್ಲಿ ತಿಳಿಸಲಾಗಿದೆ.
ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾ. ಸುಂದರೇಶ್ ನೇತೃತ್ವದ ಮತ್ತು ನ್ಯಾ. ಎನ್. ಕೋಟೀಶ್ವರ್ ಸಿಂಗ್ ಸದಸ್ಯರಾಗಿರುವ ಇಬ್ಬರು ನ್ಯಾಯಾಧೀಶರ ಪೀಠವು ಮಾಡಬೇಕಾಗಿತ್ತು.
ಪ್ರಕರಣದ ವಿಚಾರಣೆಯನ್ನು ಕ್ಷಿಪ್ರವಾಗಿ ನಡೆಸುವಂತೆ ಕೋರಿ ಹಿರಿಯ ವಕೀಲ ಆನಂದ್ ಗ್ರೋವರ್ ಆಗಸ್ಟ್ 8ರಂದು ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರಿಗೆ ಮನವಿ ಮಾಡಿದ್ದರು. ತನ್ನ ಕಕ್ಷಿಗಾರ ಗದ್ಲಿಂಗ್ ಆರೂವರೆ ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂದು ಅವರು ಹೇಳಿದ್ದರು.
‘‘ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿಯ ವಿಚಾರಣೆಯನ್ನು 11 ಬಾರಿ ಮುಂದೂಡಲಾಗಿದೆ’’ ಎನ್ನುವುದರತ್ತ ವಕೀಲ ಆನಂದ್ ಗ್ರೋವರ್ ಬೆಟ್ಟು ಮಾಡಿದ್ದಾರೆ.
ಪ್ರಕರಣದ ಆರೋಪಿಗಳಾಗಿರುವ ಗದ್ಲಿಂಗ್ ಮತ್ತು ಹೋರಾಟಗಾರ್ತಿ ಜ್ಯೋತಿ ಜಗತಾಪ್ ರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರನ್ನು ಒಳಗೊಂಡ ನ್ಯಾಯಪೀಠವು ಮಾರ್ಚ್ 27ರಂದು ಮುಂದೂಡಿತ್ತು.
ಹೋರಾಟಗಾರ ಮಹೇಶ್ ರಾವುತ್ ರಿಗೆ ನೀಡಲಾಗಿರುವ ಜಾಮೀನನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನೂ ಅದು ಮುಂದೂಡಿತ್ತು. ಬಾಂಬೆ ಹೈಕೋರ್ಟ್ ರಾವುತ್ ಗೆ ಜಾಮೀನು ನೀಡಿತ್ತು. ಆದಾಗ್ಯೂ, ಅದನ್ನು ಎನ್ಐಎಗೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಸಾಧ್ಯವಾಗುವಂತೆ ಅದೇ ಹೈಕೋರ್ಟ್ ತನ್ನ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು. ತೀರ್ಪನ್ನು ಪ್ರಶ್ನಿಸಿ ಎನ್ಐಎ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆಯಾದರೂ, ನ್ಯಾ. ಸುಂದರೇಶ್ ನೇತೃತ್ವದ ನ್ಯಾಯಪೀಠ ಅದರ ವಿಚಾರಣೆಯನ್ನು ಈವರೆಗೆ ಮಾಡಿಯೇ ಇಲ್ಲ. ರಾವುತ್ ಜೈಲಿನಲ್ಲೇ ಇದ್ದಾರೆ.







