ಕಬಾಲಿ ಸಿನಿಮಾ ನಿರ್ಮಾಪಕ ಕೆ.ಪಿ. ಚೌಧರಿ ಆತ್ಮಹತ್ಯೆ

ಕೆ.ಪಿ. ಚೌಧರಿ | PC : bollywoodbubble.com
ಪಣಜಿ: ಕೆ.ಪಿ. ಚೌದರಿ ಎಂದೇ ಹೆಸರುವಾಸಿಯಾಗಿದ್ದ ತೆಲುಗು ನಿರ್ಮಾಪಕ ಸುಂಕರ ಕೃಷ್ಣ ಪ್ರಸಾದ್ ಚೌಧರಿ ಸೋಮವಾರ ಗೋವಾದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಮ್ಮಂ ಜಿಲ್ಲೆಯ ಬೊನಾಕಲ್ ನ ನಿವಾಸಿಯಾಗಿದ್ದ ಚೌಧರಿ, ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಪದವೀಧರರಾಗಿದ್ದರು. ಅವರು ಪುಣೆಯಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಏರೊನಾಟಿಕಲ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಕಾರ್ಯಾಚರಣೆ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ನಂತರ ಸಿನಿಮಾ ಸೆಳೆತಕ್ಕೀಡಾಗಿದ್ದ ಅವರು, ರಜನಿಕಾಂತ್ ನಾಯಕತ್ವದ ‘ಕಬಾಲಿ’ ಚಿತ್ರದ ನಿರ್ಮಾಪಕರಾಗಿದ್ದರು. ಇದರೊಂದಿಗೆ, ತೆಲುಗು ಚಲನಚಿತ್ರಗಳ ವಿತರಣೆ ಹಕ್ಕುಗಳನ್ನೂ ಪಡೆದಿದ್ದ ಅವರು, ‘ಸರ್ದಾರ್ ಗಬ್ಬರ್ ಸಿಂಗ್’, ‘ಸೀತಮ್ಮ ವಕಿಟ್ಲೊ ಸಿರಿಮಲ್ಲೆ ಚೆಟ್ಟು’ ಹಾಗೂ ತಮಿಳಿನ ‘ಕನಿತಾನ್’ ಚಿತ್ರಗಳ ವಿತರಣೆಯನ್ನೂ ಮಾಡಿದ್ದರು.
ಚಲನಚಿತ್ರ ನಿರ್ಮಾಣದ ಸಂದರ್ಭದಲ್ಲಿ ತೆಲುಗು ಚಿತ್ರೋದ್ಯಮದ ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಸಾಧಿಸಿದ್ದ ಚೌಧರಿ, ನಂತರ ಗೋವಾಗೆ ತಮ್ಮ ವಾಸ್ತವ್ಯ ಬದಲಿಸಿ, ಅಲ್ಲಿ ಕ್ಲಬ್ ಒಂದನ್ನು ಪ್ರಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 2023ರಲ್ಲಿ ಸೈಬರಾಬಾದ್ ಪೊಲೀಸರು ಚೌಧರಿಯನ್ನು ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದರು. ತಮ್ಮ ಉದ್ಯಮದಲ್ಲಿ ನಷ್ಟ ಅನುಭವಿಸಿದ್ದ ಚೌದರಿ, ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಗೋವಾದಿಂದ ಮರಳುವಾಗ ನೈಜೀರಿಯಾದ ಪ್ರಜೆಯಿಂದ 100 ಪೊಟ್ಟಣ ಕೊಕೇನ್ ಅನ್ನು ಖರೀದಿಸಿದ್ದರು ಎಂದು ಸೈಬರಾಬಾದ್ ಪೊಲೀಸರು ಆರೋಪಿಸಿದ್ದರು.
ವೃತ್ತಿ ಜೀವನದಲ್ಲಿನ ವೈಫಲ್ಯ, ಹಣಕಾಸು ಬಿಕ್ಕಟ್ಟು ಹಾಗೂ ವೈಯಕ್ತಿಕ ಜೀವನದಲ್ಲಿ ಕುಗ್ಗಿ ಹೋಗಿದ್ದುದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೆ.ಪಿ.ಚೌಧರಿಆತ್ಮಹತ್ಯೆ ವಿಷಯವನ್ನು ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ದೃಢಪಡಿಸಿದ್ದಾರೆ.