ದಿಲ್ಲಿ: ಪ್ರಸಾದದ ವಿಚಾರದಲ್ಲಿ ಕಲ್ಕಾಜಿ ದೇವಸ್ಥಾನದ ಸೇವಕನನ್ನು ಥಳಿಸಿ ಹತ್ಯೆ

screengrab:X/@zoo_bear
ಹೊಸದಿಲ್ಲಿ: ಆಗ್ನೇಯ ದಿಲ್ಲಿಯ ಕಲ್ಕಾಜಿ ದೇವಸ್ಥಾನದಲ್ಲಿ ಸೇವಕನೋರ್ವನನ್ನು ಕ್ಷುಲ್ಲಕ ವಿಚಾರಕ್ಕೆ ಥಳಿಸಿ ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ ಸೇವಕನ ಮೇಲೆ ಕೋಲುಗಳಿಂದ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯ ನಿವಾಸಿ ಯೋಗೇಂದ್ರ ಸಿಂಗ್ ಕಳೆದ 15 ವರ್ಷಗಳಿಂದ ಕಲ್ಕಾಜಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೋಹನ್ (19), ಕುಲದೀಪ್ ಬಿಧುರಿ (20), ಅತುಲ್ ಪಾಂಡೆ (30), ನಿತಿನ್ ಪಾಂಡೆ (26) ಮತ್ತು ಅನಿಲ್ ಕುಮಾರ್ (55) ಎಂದು ಗುರುತಿಸಲಾಗಿದೆ.
"ಶುಕ್ರವಾರ ರಾತ್ರಿ ಸುಮಾರು 9.30ರ ಸುಮಾರಿಗೆ, ಕೆಲವು ಯುವಕರು ದರ್ಶನಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು. ದರ್ಶನದ ನಂತರ ತಮಗೆ ಪ್ರಸಾದ ನೀಡಬೇಕೆಂದು ಯೋಗೇಂದ್ರ ಅವರನ್ನು ಕೇಳಿಕೊಂಡರು. ಆದರೆ ಪ್ರಸಾದವಿಲ್ಲವೆಂದು ಯೋಗೇಂದ್ರ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ" ಎಂದು ಆಗ್ನೇಯ ಡಿಸಿಪಿ ಹೇಮಂತ್ ತಿವಾರಿ ಹೇಳಿದರು.





