ತಪ್ಪೇ ಇಲ್ಲದಿದ್ದರೆ, ಕ್ಷಮೆ ಕೇಳುವುದಿಲ್ಲ: ಕಮಲ್ ಹಾಸನ್

ಕಮಲ್ ಹಾಸನ್ | PC : PTI
ಚೆನ್ನೈ: ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಒಳಗಾಗಿರುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ತನ್ನ ತಪ್ಪೇ ಇಲ್ಲದಿದ್ದರೆ ಕ್ಷಮೆ ಕೇಳುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಚೆನ್ನೈಯಲ್ಲಿ ತನ್ನ ಮುಂದಿನ ಚಿತ್ರ ‘ಥಗ್ ಲೈಫ್’ನ ಪ್ರಚಾರ ಕಾರ್ಯಕ್ರಮದ ಸಂದರ್ಭ ಅವರು ನೀಡಿದ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಪರ ಸಂಘಟನೆಗಳು ಅವರು ಕ್ಷಮೆ ಕೋರುವಂತೆ ಆಗ್ರಹಿಸಿವೆ. ಇಲ್ಲದಿದ್ದರೆ, ಅವರ ಚಿತ್ರವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಒಡ್ಡಿವೆ.
ಕನ್ನಡಿಗರ ಈ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ)ನ ವರಿಷ್ಠ, ನಾನು ಈ ಹಿಂದೆ ಕೂಡ ಇಂತಹ ಬೆದರಿಕೆಗಳನ್ನು ಎದುರಿಸಿದ್ದೇನೆ. ಆದರೆ, ಅದರಿಂದ ವಿಚಲಿತನಾಗಿಲ್ಲ ಎಂದಿದ್ದಾರೆ.
‘‘ಈ ಹಿಂದೆ ಕೂಡ ನನಗೆ ಬೆದರಿಕೆ ಒಡ್ಡಲಾಗಿದೆ. ಆದರೆ, ಪ್ರೀತಿ ಯಾವಾಗಲೂ ಗೆಲ್ಲುತ್ತದೆ. ನಿರ್ದಿಷ್ಟ ಉದ್ದೇಶವನ್ನು ಹೊಂದಿರುವವರು ಮಾತ್ರ ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ’’ ಎಂದು ಅವರು ಹೇಳಿದ್ದಾರೆ.
ಇದು ಪ್ರಜಾಪ್ರಭುತ್ವ. ನಾನು ಸಂವಿಧಾನ ಮತ್ತು ಕಾನೂನಿನಲ್ಲಿ ನಂಬಿಕೆ ಇರಿಸಿದವನು. ನನ್ನ ಪ್ರೀತಿ ಕರ್ನಾಟಕ, ಕನ್ನಡ, ತೆಲುಗು, ಮಲೆಯಾಳಂಗೆ ಇದ್ದೇ ಇದೆ ಎಂದು ಅವರು ತಿಳಿಸಿದ್ದಾರೆ.
ತಾನು ಎಲ್ಲಾ ದಕ್ಷಿಣದ ಭಾಷೆಗಳು ಹಾಗೂ ಸಂಸ್ಕೃತಿಗೆ ಗೌರವ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ ಕಮಲ್ ಹಾಸನ್, ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ತಪ್ಪೆಸಗಿದ್ದೇನೆ ಎಂದು ಮನದಟ್ಟಾದರೆ ಮಾತ್ರ ಕ್ಷಮೆ ಕೇಳುತ್ತೇನೆ. ತಪ್ಪೆಸಗದಿದ್ದರೆ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.







