ʼಕಂಗನಾ ಗೋಬ್ಯಾಕ್ʼ: ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ಸಂಸದೆ ಕಂಗನಾ ತಡವಾಗಿ ಆಗಮಿಸಿದ್ದಕ್ಕೆ ಜನರಿಂದ ಆಕ್ರೋಶ

ಕಂಗನಾ ರಣಾವತ್ | PC : X
ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮಳೆಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ, ಕಂಗನಾ ರಣಾವತ್ ವಿರುದ್ಧ ಸ್ಥಳೀಯರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಮನಾಲಿ ಸಮೀಪದ ಪಟ್ಲಿಕುಹಾಲ್ ನಲ್ಲಿ ಕಂಗನಾ ರಣಾವತ್ ಅವರ ಕಾರಿನ ಎದುರು ಸ್ಥಳೀಯರು ಕಪ್ಪು ಬಾವುಟಗಳನ್ನು ತೋರಿಸಿ, “ಕಂಗನಾ, ಗೋ ಬ್ಯಾಕ್ ” ಎಂದು ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು. ಈ ವೇಳೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು ಎಂದು ತಿಳಿದುಬಂದಿದೆ.
हिमाचल प्रदेश के बाढ़ प्रभावित इलाके में एक महिला जब अपनी स्थानीय सांसद कंगना रनौत से अपना कष्ट साझा किया तो उनसे सांसद का जवाब सुनें! pic.twitter.com/nuVOXLev76
— Narendra Nath Mishra (@iamnarendranath) September 18, 2025
ಮಹಿಳೆಯೊಬ್ಬರು ಪ್ರವಾಹದಿಂದಾದ ನಷ್ಟದ ಬಗ್ಗೆ ಹೇಳಿಕೊಳ್ಳುತ್ತಿದ್ದರೆ ಕಂಗನಾ ಮಾತ್ರ, ‘ಇಲ್ಲಿ ನನ್ನದೂ ರೆಸ್ಟೋರೆಂಟ್ ಇದೆ, ನಿನ್ನೆ ಒಂದು ದಿನ ಕೇವಲ 50 ರೂಪಾಯಿ ವ್ಯಾಪಾರವಾಗಿದೆ. ನಾನು ಅಲ್ಲಿರುವ ಉದ್ಯೋಗಿಗಳಿಗೆ 15 ಲಕ್ಷ ರೂಪಾಯಿ ಪಾವತಿಸುತ್ತೇನೆ. ದಯವಿಟ್ಟು ನನ್ನ ನೋವನ್ನೂ ಅರ್ಥಮಾಡಿಕೊಳ್ಳಿ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕ್ಷೇತ್ರದ ಸಂಸದೆಯಾಗಿ ಕಂಗನಾ ಅವರ ಪ್ರತಿಕ್ರಿಯೆ ಸ್ಥಳೀಯರನ್ನು ಕೆರಳಿಸಿದೆ. ಸದ್ಯ ಕಂಗನಾ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗಸ್ಟ್ 25 ಮತ್ತು 26ರಂದು ಕುಲ್ಲು–ಮನಾಲಿ ಭಾಗದಲ್ಲಿ ದಾಖಲೆಯ ಮಳೆಯಿಂದ ಭೂಕುಸಿತ, ಪ್ರವಾಹ ಸಂಭವಿಸಿತ್ತು. ಬಿಯಾಸ್ ನದಿಯ ಪ್ರಕ್ಷುಬ್ಧತೆಯಿಂದ ಹೋಟೆಲ್ಗಳು, ಅಂಗಡಿಗಳು ಹಾಗೂ ಅನೇಕ ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಚಂಡೀಗಢ–ಮನಾಲಿ ಹಾಗೂ ಮನಾಲಿ–ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ನೀರು ಹರಿದು, ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮಳೆಪೀಡಿತ ಸೋಲಾಂಗ್ ಹಾಗೂ ಪಲ್ಚನ್ ಗ್ರಾಮಗಳಿಗೆ ಭೇಟಿ ನೀಡಿದ ಕಂಗನಾ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಮಾಜಿ ಶಾಸಕ ಗೋವಿಂದ್ ಸಿಂಗ್ ಠಾಕೂರ್ ಅವರು ಮೂಲಸೌಕರ್ಯ ಹಾನಿಯ ವಿವರ ನೀಡುತ್ತಾ, ಸೋಲಾಂಗ್ ಗ್ರಾಮ ಬಿಯಾಸ್ ನದಿಯ ದಡಗಳು ಅಪಾಯದಲ್ಲಿದೆ. ನದಿಯ ಹರಿವನ್ನು ಬದಲಾಯಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, ಅರಣ್ಯನಾಶ, ಅತಿಯಾದ ನಿರ್ಮಾಣ ಕಾಮಗಾರಿ ಮತ್ತು ಒಳಚರಂಡಿ ಕೊರತೆಯಿಂದ ವಿಪತ್ತುಗಳು ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದರು.
“ಕೇಂದ್ರದಿಂದ ಹಿಮಾಚಲಕ್ಕೆ ಈಗಾಗಲೇ 10,000 ಕೋಟಿ ರೂ. ನೆರವು ಬಂದಿದೆ. ಪ್ರಸ್ತುತ ಸರ್ಕಾರದ ಆದ್ಯತೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದಾಗಿದೆ” ಎಂದು ಅವರು ಹೇಳಿದರು.
ರಸ್ತೆ ಪುನಃಸ್ಥಾಪನೆಗೆ ಎನ್ಎಚ್ಎಐ ಶ್ರಮಿಸುತ್ತಿದೆ, ಆದರೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಅವರು ಟೀಕಿಸಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನಾಯಕತ್ವ ಗೈರು ಪ್ರಶ್ನಿಸಿದ ಕಂಗನಾ, ರಾಹುಲ್ ಗಾಂಧಿಯ “ವೋಟ್ ಚೋರ್” ಅಭಿಯಾನವನ್ನು ಖಂಡಿಸಿ, “ಪುರಾವೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಿ” ಎಂದು ಹೇಳಿದರು.







