ಕರ್ನಾಟಕದ ‘ಮಿಲೆಟ್ಸ್ ಟು ಮೈಕ್ರೋಚಿಪ್’ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ತಪ್ಪಿಸಿಕೊಂಡಿದ್ದು ಏಕೆ?

Photo Credit : X
ಹೊಸದಿಲ್ಲಿ, ಜ.26: ಗಣರಾಜ್ಯೋತ್ಸವ ಸಂಭ್ರಮವು ಭಾರತದ ಹೆಮ್ಮೆ ಮತ್ತು ಪರಂಪರೆಯ ಅದ್ಭುತ ಪ್ರದರ್ಶನದೊಂದಿಗೆ ಸಂಪನ್ನಗೊಂಡಿದೆ. ಪರೇಡ್ ವೀಕ್ಷಿಸಲು ದಿಲ್ಲಿಯ ಕರ್ತವ್ಯ ಪಥದಲ್ಲಿ ಅಪಾರ ಜನಸಮೂಹ ನೆರೆದಿತ್ತು. ಆದಾಗ್ಯೂ, ಈ ವರ್ಷ ಕರ್ನಾಟಕದ ‘ಮಿಲೆಟ್ಸ್ ಟು ಮೈಕ್ರೋಚಿಪ್ (ಸಿರಿಧಾನ್ಯಗಳಿಂದ ಮೈಕ್ರೋಚಿಪ್ವರೆಗೆ)’ ಸ್ತಬ್ಧಚಿತ್ರವು ಪರೇಡ್ನ ಭಾಗವಾಗಿರಲಿಲ್ಲ.
ಬದಲಿಗೆ, ಅದನ್ನು ಕೆಂಪುಕೋಟೆಯಲ್ಲಿ 30 ದಿನಗಳ ಕಾಲ ನಡೆಯಲಿರುವ ಭಾರತ ಪರ್ವ್ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶಿಸಲಾಗಿದ್ದು, ಸಂದರ್ಶಕರಿಗೆ ಸಾಂಪ್ರದಾಯಿಕ ಕೃಷಿಯಿಂದ ಆಧುನಿಕ ತಂತ್ರಜ್ಞಾನ ಆವಿಷ್ಕಾರಗಳವರೆಗಿನ ರಾಜ್ಯದ ಪಯಣವನ್ನು ಹತ್ತಿರದಿಂದ ವೀಕ್ಷಿಸಲು ಅವಕಾಶ ಕಲ್ಪಿಸಿದೆ.
ಅಧಿಕಾರಿಗಳ ಪ್ರಕಾರ, ಈ ವರ್ಷದ ಮುಖ್ಯ ಪರೇಡ್ಗೆ ಕರ್ನಾಟಕ ಸ್ತಬ್ಧಚಿತ್ರದ ವಿಷಯವನ್ನು ಆಯ್ಕೆ ಮಾಡಲಾಗಿಲ್ಲ. ಭಾರತ ಪರ್ವ್ ವೇದಿಕೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರಾದೇಶಿಕ ಪಾಕ ಪದ್ಧತಿಗಳು, ಕರಕುಶಲ ವಸ್ತುಗಳು ಮತ್ತು ನವೀನತೆಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತಿದ್ದು, ಇದು ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸೂಕ್ತ ಪರ್ಯಾಯವಾಗಿದೆ.
2022ರ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಂದು ವರ್ಷ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದರೆ, ಮರು ವರ್ಷ ಭಾರತ ಪರ್ವ್ನಲ್ಲಿ ಪಾಲ್ಗೊಳ್ಳುತ್ತವೆ. 2026ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಅನುಪಸ್ಥಿತಿಗೆ ಇದು ಕಾರಣವಾಗಿರಬಹುದು.
ದಿಲ್ಲಿಯಲ್ಲಿ ನಿಯೋಜಿಸಲಾದ 200 ಕುಶಲಕರ್ಮಿಗಳ ತಂಡವು ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ನಿರ್ಮಿಸಿದೆ.







