ದೇಶದಲ್ಲೇ ಅತ್ಯಂತ ಹೆಚ್ಚಿನ ಕಾಡಾನೆಗಳು ಕರ್ನಾಟಕದಲ್ಲಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದೇಶದ ಮೊದಲ ಡಿಎನ್ಎ ಆಧಾರಿತ ಗಣತಿಯಂತೆ ಭಾರತದಲ್ಲಿ ಅಂದಾಜು 22,446 ಆನೆಗಳಿದ್ದು, ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಕಾಡಾನೆಗಳಿವೆ. 2017ರಲ್ಲಿ ದೇಶದಲ್ಲಿ 27,312 ಕಾಡಾನೆಗಳಿದ್ದವು ಎಂದು ವರದಿಯಾಗಿದೆ.
2025ರ ಸಮೀಕ್ಷೆಯು 22,446 ಸರಾಸರಿಯೊಂದಿಗೆ ದೇಶದಲ್ಲಿ ಆನೆಗಳ ಸಂಖ್ಯೆಯನ್ನು 18,255 ರಿಂದ 26,645ರ ನಡುವೆ ಅಂದಾಜಿಸಿದೆ.
2021ರಲ್ಲಿ ಸಮೀಕ್ಷೆಯು ಆರಂಭಗೊಂಡ ಸುಮಾರು ನಾಲ್ಕು ವರ್ಷಗಳ ಬಳಿಕ ಸರಕಾರವು ಸುದೀರ್ಘ ವಿಳಂಬಿತ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಪ್ರಕ್ರಿಯೆಯಲ್ಲಿನ ಸಂಕೀರ್ಣವಾದ ಆನುವಂಶಿಕ ವಿಶ್ಲೇಷಣೆ ಮತ್ತು ದತ್ತಾಂಶ ಮೌಲ್ಯೀಕರಣ ವಿಳಂಬಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನೆಗಳು ವಾಸವಿರುವ ಪ್ರದೇಶಗಳಿಂದ 21,056 ಲದ್ದಿ ಮಾದರಿಗಳನ್ನು ಸಂಗ್ರಹಿಸಿದ್ದ ವಿಜ್ಞಾನಿಗಳು ಕಾಡಾನೆಗಳನ್ನು ಪ್ರತ್ಯೇಕವಾಗಿ ಗುರುತಿಸಲು ಡಿಎನ್ಎ ಫಿಂಗರ್ಪ್ರಿಂಟ್ನ್ನು ಬಳಸಿದ್ದರು. ಮನುಷ್ಯರ ಆನುವಂಶಿಕತೆ ಸಂಕೇತವನ್ನು ಗುರುತಿಸಲೂ ಹೆಚ್ಚುಕಡಿಮೆ ಇದೇ ವಿಧಾನವನ್ನು ಬಳಸಲಾಗುತ್ತದೆ.
ಪ್ರದೇಶವಾರು ಪಶ್ಚಿಮ ಘಟ್ಟಗಳು 11,934 ಆನೆಗಳೊಂದಿಗೆ ಅತ್ಯಂತ ದೊಡ್ಡ ಭದ್ರಕೋಟೆಯಾಗಿ ಉಳಿದುಕೊಂಡಿವೆ. 6,559 ಆನೆಗಳೊಂದಿಗೆ ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರಾ ಪ್ರವಾಹ ಬಯಲುಗಳು ನಂತರದ ಸ್ಥಾನದಲ್ಲಿವೆ.
ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾನದಿಯ ಬಯಲು ಪ್ರದೇಶಗಳಲ್ಲಿ 2,062 ಆನೆಗಳಿದ್ದರೆ,ಮಧ್ಯಭಾರತ ಮತ್ತು ಪೂರ್ವ ಘಟ್ಟಗಳಲ್ಲಿ ಒಟ್ಟು 1,891 ಆನೆಗಳಿವೆ.
ಕರ್ನಾಟಕದಲ್ಲಿ ಅತ್ಯಂತ ಹೆಚ್ಚು(6,013) ಆನೆಗಳಿದ್ದು, ಅಸ್ಸಾಂ(4,159), ತಮಿಳುನಾಡು(3,136), ಕೇರಳ(2,785) ಮತ್ತು ಉತ್ತರಾಖಂಡ(1,792) ನಂತರದ ಸ್ಥಾನಗಳಲ್ಲಿವೆ. ಒಡಿಶಾದಲ್ಲಿ 912 ಆನೆಗಳಿದ್ದರೆ ಛತ್ತೀಸ್ಗಡ ಮತ್ತು ಜಾರ್ಖಂಡ್ಗಳಲ್ಲಿ ಒಟ್ಟಾರೆಯಾಗಿ 650ಕ್ಕೂ ಹೆಚ್ಚು ಆನೆಗಳಿವೆ.
ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶದಲ್ಲಿ 617,ಮೇಘಾಲಯದಲ್ಲಿ 677,ನಾಗಾಲ್ಯಾಂಡ್ನಲ್ಲಿ 252 ಮತ್ತು ತ್ರಿಪುರಾದಲ್ಲಿ 153 ಆನೆಗಳು ಉಳಿದುಕೊಂಡಿವೆ.
ಮಧ್ಯಪ್ರದೇಶ(97) ಮತ್ತು ಮಹಾರಾಷ್ಟ್ರ(63) ದಂತಹ ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಆನೆಗಳ ಸಣ್ಣ ಹಿಂಡುಗಳು ಚದುರಿಕೊಂಡಿವೆ.
ಪರಿಸರ ಸಚಿವಾಲಯ,ಪ್ರಾಜೆಕ್ಟ್ ಎಲಿಫಂಟ್ ಮತ್ತು ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜಂಟಿಯಾಗಿ ಕೈಗೊಂಡಿದ್ದ 2025ರ ಸಮೀಕ್ಷೆಯು ಭವಿಷ್ಯದ ಮೇಲ್ವಿಚಾರಣೆ ಮತ್ತು ಸಂರಕ್ಷಣಾ ಯೋಜನೆಗಾಗಿ ಹೊಸ ವೈಜ್ಞಾನಿಕ ಮೂಲಾಧಾರವನ್ನು ಸ್ಥಾಪಿಸಿದೆ.
ಹೊಸ ಗಣತಿಯು ನೆಲದಲ್ಲಿಯ ಸಮೀಕ್ಷೆಗಳು,ಉಪಗ್ರಹ ಆಧಾರಿತ ಮ್ಯಾಪಿಂಗ್ ಮತ್ತು ಆನುವಂಶಿಕ ವಿಶ್ಲೇಷಣೆ ಸಂಯೋಜಿತ ಮೂರು ಹಂತದ ಪ್ರಕ್ರಿಯೆಯನ್ನು ಬಳಸಿದೆ.
ಮೊದಲ ಹಂತದಲ್ಲಿ ಅರಣ್ಯ ಇಲಾಖಾ ತಂಡಗಳು ವ್ಯಾಪಕವಾದ ಹೆಜ್ಜೆ ಗುರುತು ಸಮೀಕ್ಷೆಗಳಲ್ಲಿ ಆನೆಗಳ ಉಪಸ್ಥಿತಿಯನ್ನು ದಾಖಲಿಸಲು ಎಂ-ಸ್ಟ್ರೈಪ್ಸ್ ಆ್ಯಪ್ನ್ನು ಬಳಸಿದ್ದವು.
ಎರಡನೇ ಹಂತದಲ್ಲಿ ಉಪಗ್ರಹ ದತ್ತಾಂಶಗಳನ್ನು ಬಳಸಿಕೊಂಡು ಆವಾಸ ಸ್ಥಾನದ ಗುಣಮಟ್ಟ ಮತ್ತು ಮಾನವ ಹೆಜ್ಜೆ ಗುರುತುಗಳನ್ನು ನಿರ್ಣಯಿಸಲಾಗಿತ್ತು.
ಮೂರನೇ ಹಂತದಲ್ಲಿ 4,065 ವಿಶಿಷ್ಟ ಆನೆಗಳನ್ನು ಗುರುತಿಸಲು ಲದ್ದಿಯಿಂದ ಡಿಎನ್ಎ ಹೊರತೆಗೆಯಲಾಗಿತ್ತು ಮತ್ತು ವಿಜ್ಞಾನಿಗಳು ಆನೆಗಳ ಒಟ್ಟಾರೆ ಸಂಖ್ಯೆಯನ್ನು ಅಂದಾಜಿಸಲು ಮಾರ್ಕ್ ಆ್ಯಂಡ್ ರಿಕ್ಯಾಪ್ಚರ್ ಮಾದರಿಯನ್ನು ಬಳಸಿದ್ದರು.
ವಿಶ್ವದಲ್ಲಿ ಈಗ ಉಳಿದುಕೊಂಡಿರುವ ಏಶ್ಯನ್ ಆನೆಗಳ ಪೈಕಿ ಶೇ.60ಕ್ಕೂ ಹೆಚ್ಚಿನವುಗಳಿಗೆ ಭಾರತವು ನೆಲೆಯಾಗಿದೆ. ಆದರೆ ಅತಿಕ್ರಮಣ,ಮೂಲಸೌಕರ್ಯ ಯೋಜನೆಗಳು ಮತ್ತು ಮಾನವ-ಆನೆ ಸಂಘರ್ಷದಿಂದಾಗಿ ಅವುಗಳ ಆವಾಸ ಸ್ಥಾನಗಳು ಕುಗ್ಗುತ್ತಲೇ ಇವೆ.







