ಕರೂರು ಕಾಲ್ತುಳಿತ ಪ್ರಕರಣ | CBI ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ನಟ ವಿಜಯ್ | Photo Credit ; PTI
ಹೊಸದಿಲ್ಲಿ, ಜ.12: ಕರೂರು ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿ ಟಿವಿಕೆ ವರಿಷ್ಠ ಹಾಗೂ ನಟ ವಿಜಯ್ ದಿಲ್ಲಿಯಲ್ಲಿರುವ ಸಿಬಿಐ ಕಚೇರಿಯಲ್ಲಿ ಸೋಮವಾರ ವಿಚಾರಣೆಗೆ ಹಾಜರಾದರು.
ಸಿಬಿಐ ಅಧಿಕಾರಿಗಳು ವಿಜಯ್ ಅವರನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದರು.
41 ಜನರು ಸಾವನ್ನಪ್ಪಲು ಕಾರಣವಾದ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ತಮ್ಮ ಪಕ್ಷ ಹೊಣೆಗಾರ ಅಲ್ಲ ಎಂದು ವಿಜಯ್ ಅವರು ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ.
“ಟಿವಿಕೆ ಜವಾಬ್ದಾರವಲ್ಲ. ಮತ್ತಷ್ಟು ದುರಂತವನ್ನು ತಪ್ಪಿಸಲು ಅವರು ಸ್ಥಳದಿಂದ ಹೊರಟು ಹೋಗಿದ್ದರು” ಎಂದು ವಿಜಯ್ ಅವರು ಸಿಬಿಐ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗುವುದು. ಅವರ ಹೇಳಿಕೆಯನ್ನು ಪೊಲೀಸರ ಹೇಳಿಕೆಯೊಂದಿಗೆ ಹೋಲಿಸಿ ಪರಿಶೀಲಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
“ವಿಜಯ್ ಅವರ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಪೊಂಗಲ್ ಹಬ್ಬವನ್ನು ಉಲ್ಲೇಖಿಸಿ ಅವರು ವಿಚಾರಣೆ ಮುಂದೂಡುವಂತೆ ಕೋರಿದ್ದಾರೆ. ಆದ್ದರಿಂದ ಅವರನ್ನು ಮಂಗಳವಾರ ವಿಚಾರಣೆಗೆ ಕರೆಯಲಾಗುವುದಿಲ್ಲ. ಪೊಂಗಲ್ ಹಬ್ಬದ ಬಳಿಕ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ” ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ವಿಜಯ್ ಅವರ ರಾಜಕೀಯ ರ್ಯಾಲಿ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು.







