ಕರೂರ್ ಕಾಲ್ತುಳಿತ ಪ್ರಕರಣ| ಎರಡನೇ ಬಾರಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ TVK ಮುಖ್ಯಸ್ಥ ವಿಜಯ್

Photo| PTI
ಹೊಸದಿಲ್ಲಿ: ತಮಿಳುನಾಡಿನ ಕರೂರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ಸೋಮವಾರ ಕೇಂದ್ರ ತನಿಖಾ ದಳದ (ಸಿಬಿಐ) ಮುಂದೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾದರು.
ಲೋಧಿ ರಸ್ತೆಯಲ್ಲಿರುವ ಸಿಬಿಐ ಪ್ರಧಾನ ಕಚೇರಿಗೆ ವಿಜಯ್ ಅವರು ಸೋಮವಾರ ಬೆಳಿಗ್ಗೆ ಆಗಮಿಸಿದರು. ಭ್ರಷ್ಟಾಚಾರ ನಿಗ್ರಹ ಘಟಕದ ಉಪ ಸೂಪರಿಂಟೆಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದ ತಂಡವು ವಿಜಯ್ ರನ್ನು ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಈ ಹಿಂದೆ ಜನವರಿ 12ರಂದು ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಜಯ್ ಅವರನ್ನು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿತ್ತು. ಬಳಿಕ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಪೊಂಗಲ್ ಹಬ್ಬದ ಕಾರಣ ಅವರು ಮತ್ತೊಂದು ದಿನಾಂಕವನ್ನು ಕೋರಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡದಿಂದ ವಿಚಾರಣೆಗೆ ವಹಿಸಿಕೊಂಡಿರುವ ಸಿಬಿಐ, ಸೆಪ್ಟೆಂಬರ್ 27, 2025ರಂದು ಕರೂರ್ನಲ್ಲಿ ನಡೆದ ಕಾಲ್ತುಳಿತದ ಕುರಿತು ತನಿಖೆಯನ್ನು ಮುಂದುವರಿಸಿದೆ.
ಆ ಘಟನೆಯಲ್ಲಿ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ಸಂಗ್ರಹ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







