ಕರೂರು ಕಾಲ್ತುಳಿತ ದುರಂತ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ

Photo credit: PTI
ಕರೂರು: ತಮಿಳುನಾಡಿನ ಕರೂರಿನಲ್ಲಿ ಶನಿವಾರ ರಾತ್ರಿ ನಟ-ರಾಜಕಾರಣಿ ವಿಜಯ್ ಅವರ ತಳಪತಿ ವಿಜಯ್ ಪಕ್ಷ (ಟಿವಿಕೆ) ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಸುಗುಣಾ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮೃತರಲ್ಲಿ 18 ಮಹಿಳೆಯರು ಹಾಗೂ 10 ಮಕ್ಕಳು ಸೇರಿದ್ದಾರೆ. ವೇಲುಸಾಮಿಪುರಂನ 2 ವರ್ಷದ ವಿ. ಗುರು ವಿಷ್ಣು ಅತಿ ಕಿರಿಯ ಸಂತ್ರಸ್ತ ಎಂದು ಗುರುತಿಸಲಾಗಿದೆ. ಮಹಿಳೆಯರಲ್ಲಿ ಹೆಚ್ಚಿನವರು 30ರ ಹರೆಯದವರಾಗಿದ್ದು, ಪುರುಷರು 20–30 ವರ್ಷದವರಾಗಿದ್ದಾರೆ. ಸಂಬಂಧಿಕರು ಮೃತದೇಹಗಳನ್ನು ಗುರುತಿಸಿದ ಬಳಿಕ ಕುಟುಂಬಗಳಿಗೆ ಹಸ್ತಾಂತರಿಸಲಾಗಿದ್ದು, ವಾಹನಗಳಲ್ಲಿ ಸ್ವಗ್ರಾಮಗಳಿಗೆ ಮೃತದೇಹಗಳನ್ನು ಸಾಗಿಸಲಾಯಿತು.
ಟಿವಿಕೆ ರ್ಯಾಲಿಗೆ ಸಾವಿರಾರು ಜನರು ಆಗಮಿಸಿದ್ದರು. ಬಿಸಿಲಿನ ತಾಪಮಾನ ಹೆಚ್ಚಿದ್ದು, ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಜನಸಂದಣಿ ನಿಯಂತ್ರಣ ತಪ್ಪಿ ಕಾಲ್ತುಳಿತ ಸಂಭವಿಸಿದೆ ಎಂದು ತಮಿಳುನಾಡು ಡಿಜಿಪಿ ಜಿ. ವೆಂಕಟರಾಮನ್ ಹೇಳಿದ್ದಾರೆ. ವಿಜಯ್ ಅವರ ಆಗಮನದ ಕುರಿತು ಮಧ್ಯಾಹ್ನ ಅಧಿಕೃತ ಪ್ರಕಟಣೆ ಹೊರಬಂದ ನಂತರ ಜನಸಂದಣಿ ಹೆಚ್ಚಾಗಿರುವುದಾಗಿ ಅವರು ವಿವರಿಸಿದರು. “ಯಾರನ್ನೂ ದೂರುವ ಉದ್ದೇಶವಿಲ್ಲ, ಆದರೆ ಸತ್ಯವನ್ನು ತಿಳಿಸುತ್ತಿದ್ದೇವೆ” ಎಂದು ಡಿಜಿಪಿ ಸ್ಪಷ್ಟಪಡಿಸಿದರು.
ಇದೇ ವೇಳೆ, ಸೋಮವಾರ ಬೆಳಿಗ್ಗೆ ಚೆನ್ನೈನ ನೀಲಂಕರೈ ಪ್ರದೇಶದ ಪೂರ್ವ ಕರಾವಳಿ ರಸ್ತೆಯಲ್ಲಿರುವ ವಿಜಯ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿದ ಕುರಿತು ವರದಿಯಾಗಿದೆ. ಅನಾಮಧೇಯ ವ್ಯಕ್ತಿಯೊಬ್ಬರು ಮನೆಯಲ್ಲಿ ಸ್ಫೋಟಕ ಸಾಧನ ಇಟ್ಟಿರುವ ಕುರಿತು ಪೊಲೀಸರಿಗೆ ತಿಳಿಸಿದ್ದಾನೆ.
ಎಚ್ಚರಿಕೆಯ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ನೆರವಿನಿಂದ ಮನೆಯ ಒಳಹೊರಗೆ ಸಂಪೂರ್ಣ ಶೋಧ ನಡೆಸಿದರು. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ, ಪ್ರಕರಣದ ತನಿಖೆ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







