ಕರೂರು ಕಾಲ್ತುಳಿತ ಪ್ರಕರಣ : ಟಿವಿಕೆಯ ಇಬ್ಬರು ನಾಯಕರಿಗೆ ಅ.14ರವರೆಗೆ ನ್ಯಾಯಾಂಗ ಬಂಧನ

Credit: X/@PTI_News
ಕರೂರು (ತಮಿಳುನಾಡು), ಸೆ. 30: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಹಾಗೂ ನಟ ವಿಜಯ್ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಟಿವಿಕೆಯ ಇಬ್ಬರು ಪದಾಧಿಕಾರಿಗಳಿಗೆ ತಮಿಳುನಾಡು ಕರೂರಿನ ಸ್ಥಳೀಯ ನ್ಯಾಯಾಲಯ ಅಕ್ಟೋಬರ್ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವೈದ್ಯಕೀಯ ಪರೀಕ್ಷೆಯ ಬಳಿಕ ಟಿವಿಕೆಯ ಕರೂರು ಪಶ್ಚಿಮ ಜಿಲ್ಲೆಯ ಕಾರ್ಯದರ್ಶಿ ಮತಿಯಳಗನ್ ಹಾಗೂ ಕರೂರು ಪಟ್ಟಣದ ಪದಾಧಿಕಾರಿ ಎಂ.ಸಿ. ಪೌನ್ ರಾಜ್ ಅವರನ್ನು ಕರೂರು ನಗರ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಟಿವಿಕೆ ವರಿಷ್ಠ ವಿಜಯ್ ಅವರ ರ್ಯಾಲಿಗಾಗಿ ಧ್ವಜಸ್ತಂಬ ಹಾಗೂ ಫ್ಲೆಕ್ಸ್ ಬ್ಯಾನರ್ಗಳನ್ನು ವ್ಯವಸ್ಥೆಗೊಳಿಸಿದ ಮತಿಯಳಗನ್ ಹಾಗೂ ಎಂ.ಸಿ. ಪೌನ್ ರಾಜ್ ಅವರನ್ನು ಕಾಲ್ತುಳಿತದ ಘಟನೆಗೆ ಸಂಬಂಧಿಸಿ ಬಂಧಿಸಲಾಗಿದೆ.
ಕರೂರ್ ಪೊಲೀಸರು ಮತಿಯಳಗನ್ ನನ್ನು ಸೋಮವಾರ ಹಾಗೂ ಎಂಸಿ ಪೌನ್ ರಾಜ್ ನನ್ನು ಮಂಗಳವಾರ ಬಂಧಿಸಿದ್ದಾರೆ.
ಕಾಲ್ತುಳಿತದ ಘಟನೆಗೆ ಸಂಬಂಧಿಸಿ ಟಿವಿಕೆಯ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಾನೂನು ಪ್ರಕಾರ ಅನುಮತಿ ಕೇಳಲಾಗಿದೆ ಹಾಗೂ ಸಭೆ ನಡೆಸಲಾಗಿದೆ ಎಂದು ನಾವು ಟಿವಿಕೆ ಪರ ವಾದಿಸಿದ್ದೇವೆ. ಎಲ್ಲವೂ ಕಾನೂನಿನಂತೇ ನಡೆದಿದೆ. ಆದರೆ, ಪೊಲೀಸರು ಸಭೆಗೆ ಸಾಕಷ್ಟು ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ನಾವು 10 ಸಾವಿರ ಜನರು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು ಎಂದು ಪತ್ರ ನೀಡಿದ್ದೆವು ಎಂದು ಟಿವಿಕೆಯ ನ್ಯಾಯವಾದಿ ಮಣಿಕಂಠನ್ ತಿಳಿಸಿದ್ದಾರೆ.
‘‘ಪೊಲೀಸರ ಸಲಹೆಯಂತೆ ಒಂದು ಸಭೆಯನ್ನು ರದ್ದುಗೊಳಿಸಲಾಗಿತ್ತು. ಜನಸಂಖ್ಯೆ ಹೆಚ್ಚಾಗಬಹುದು. ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರು ಸಲಹೆ ನೀಡಬಹುದಿತ್ತು. ಕಾನೂನಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಜಾಮೀನಿಗೆ ಅರ್ಜಿ ಸಲ್ಲಿಸಲು ಅವರಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ನ್ಯಾಯಮೂರ್ತಿ ಅಭಿಪ್ರಾಯಿಸಿದ್ದಾರೆ. ನ್ಯಾಯಮೂರ್ತಿಗಳು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ’’ ಎಂದು ಅವರು ಹೇಳಿದರು.







