ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ಮಿಸಿದವರು 'ಮಣಿಪುರ್ ಫೈಲ್ಸ್' ನಿರ್ಮಿಸಲಿ: ಶಿವಸೇನೆ (UBT) ಸವಾಲು

Photo: ಉದ್ಧವ್ ಠಾಕ್ರೆ | PTI
ಮುಂಬೈ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) "ಮಣಿಪುರ ಫೈಲ್ಸ್" ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದೆ.
ಈ ವರ್ಷದ ಆರಂಭದಲ್ಲಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ವಿವಾದಾತ್ಮಕ ಚಿತ್ರ 'ದಿ ಕಾಶ್ಮೀರ್ ಫೈಲ್ಸ್' ತೆರೆಗೆ ಬಂದು ಚರ್ಚೆಗೆ ನಾಂದಿ ಹಾಡಿತ್ತು.
ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ದೌರ್ಜನ್ಯಗಳು ಕಾಶ್ಮೀರಕ್ಕಿಂತಲೂ ಭೀಕರವಾಗಿದೆ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಪ್ರತಿಪಾದಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಸಂಪಾದಕೀಯದಲ್ಲಿ ಟೀಕಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತಂತೆ “ದಿ ಮಣಿಪುರ್ ಫೈಲ್ಸ್” ಚಿತ್ರ ಮಾಡುವಂತೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ನೆಟ್ಟಿಗರು ಸವಾಲು ಹಾಕಿದ್ದಾರೆ.
“ಕಾಶ್ಮೀರಿ ಪಂಡಿತರ ಹತ್ಯೆಗಳ ಬಗ್ಗೆ ಭಾರತದ ನ್ಯಾಯಾಂಗ ಮೌನವಾಗಿದೆ, ನಮ್ಮ ಸಂವಿಧಾನದಲ್ಲಿ ಖಾತರಿಪಡಿಸಿದ ಕಾಶ್ಮೀರಿ ಹಿಂದುಗಳ ಜೀವಿಸುವ ಹಕ್ಕನ್ನು ಸ್ವಯಂಪ್ರೇರಣೆಯಿಂದ ರಕ್ಷಿಸಲು ಅದು ಇನ್ನೂ ವಿಫಲವಾಗಿದೆ,” ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರೆ ಅದಕ್ಕೆ ಪ್ರತಿಕ್ರಿಯಿಸಿದವರೊಬ್ಬರು “ಸಮಯ ವ್ಯರ್ಥಮಾಡಬೇಡಿ, ನಿಮ್ಮಲ್ಲಿ ಗಂಡಸುತನವಿದ್ದರೆ ಹೋಗಿ ಮಣಿಪುರ ಫೈಲ್ಸ್ ಚಿತ್ರ ನಿರ್ಮಿಸಿ,” ಎಂದು ಸವಾಲು ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ, “ನನ್ನ ಮೇಲೆ ಅಷ್ಟೊಂದು ವಿಶ್ವಾಸವಿರಿಸಿದ್ದಕ್ಕೆ ಧನ್ಯವಾದಗಳು. ಎಲ್ಲಾ ಸಿನೆಮಾ ನನ್ನಿಂದಲೇ ತಯಾರಿಸಬೇಕೆಂದಿರುವಿರಾ? ನಿಮ್ಮ ಟೀಂ ಇಂಡಿಯಾದಲ್ಲಿ ಗಂಡಸುತನವಿರುವ ಬೇರೆ ಯಾರೂ ಚಿತ್ರ ತಯಾರಕರು ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
Thanks for having so much faith in me. Par saari films mujhse hi banwaoge kya yaar? Tumhari ‘Team India’ mein koi ‘man enough’ filmmaker nahin hai kya? https://t.co/35U9FMf32G
— Vivek Ranjan Agnihotri (@vivekagnihotri) July 21, 2023







