Jammu & Kashmir | ಫೆಲೆಸ್ತೀನ್ ಧ್ವಜದ ಚಿಹ್ನೆಯಿರುವ ಹೆಲ್ಮೆಟ್ ಧರಿಸಿದ್ದಕ್ಕೆ ಕ್ರಿಕೆಟಿಗನನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು

Photo: maktoobmedia
ಜಮ್ಮು, ಜ.2: ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿಯಾಗಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಫೆಲೆಸ್ತೀನ್ ನ ಧ್ವಜದ ಚಿಹ್ನೆಯಿರುವ ಹೆಲ್ಮೆಟ್ ಧರಿಸಿ ಆಡಿದ್ದ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟಿಗನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಫುರ್ಖಾನ್ ಭಟ್ ಎಂಬ ಆಟಗಾರ ಜಮ್ಮು ಜಿಲ್ಲೆಯಲ್ಲಿ ಬುಧವಾರ ನಡೆದ ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಈ ಪಂದ್ಯಾವಳಿಯನ್ನು ಕಾಶ್ಮೀರ ನಿವಾಸಿ ಸಾಜಿದ್ ಭಟ್ ಖಾಸಗಿಯಾಗಿ ಆಯೋಜಿಸಿದ್ದರು. ಪ್ರಕರಣ ಸಂಬಂಧ ಆಯೋಜಕರನ್ನೂ ಡೊಮನಾ ಪೊಲೀಸ್ ಠಾಣೆಗೆ ಕರೆಸಿ ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ.
ಪಂದ್ಯದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆದ ಬಳಿಕ, ಫುರ್ಖಾನ್ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿವೆ. ಗುರುವಾರ ಸಂಜೆ ವೇಳೆಗೆ ಈ ಸಂಬಂಧ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟನೆ ನೀಡಿದ್ದು, ಸಂಬಂಧಿತ ಪಂದ್ಯಾವಳಿ ಖಾಸಗಿ ಸ್ವರೂಪದ್ದಾಗಿದ್ದು, ಅಸೋಸಿಯೇಷನ್ ನೊಂದಿಗೆ ಯಾವುದೇ ಅಧಿಕೃತ ಸಂಪರ್ಕ ಇಲ್ಲ ಎಂದು ತಿಳಿಸಿದೆ. ಇದು ಸ್ಥಳೀಯ ಆಟಗಾರರನ್ನು ಒಳಗೊಂಡ ಸೀಮಿತ ಮಟ್ಟದ ಪಂದ್ಯಾವಳಿಯಾಗಿದ್ದು, ಪ್ರೇಕ್ಷಕರಿಗೂ ಅವಕಾಶ ನೀಡಲಾಗಿರಲಿಲ್ಲ ಎಂದು ಹೇಳಿದೆ.
ಅಸೋಸಿಯೇಷನ್ ಅಧಿಕೃತ ಉಸ್ತುವಾರಿ ಬ್ರಿಗೇಡಿಯರ್ ಅನಿಲ್ ಗುಪ್ತಾ, ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಆದರೆ ಇದು ಸಂಘದ ಅಧಿಕಾರ ವ್ಯಾಪ್ತಿಗೆ ಸೇರದ ವಿಷಯವಾಗಿರುವುದರಿಂದ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ BJP ಯೂ ಆಕ್ಷೇಪ ವ್ಯಕ್ತಪಡಿಸಿದ್ದು, ಫುರ್ಖಾನ್ ಭಟ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.







