ಕೇದಾರನಾಥ್ ಹೆಲಿಕಾಪ್ಟರ್ ಅಪಘಾತ; ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲು

PC : PTI
ಹೊಸದಿಲ್ಲಿ: ಕೇದಾರನಾಥದ ಸಮೀಪ ಸಂಭವಿಸಿದ ಹೆಲಿಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿ ನಿರ್ಲಕ್ಷ್ಯದ ಆರೋಪದಲ್ಲಿ ಹೆಲಿಕಾಪ್ಟರ್ ಸೇವೆ ನಿರ್ವಹಿಸುವ ಸಂಸ್ಥೆ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೇದಾರನಾಥದ ಸಮೀಪ ರವಿವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ 2 ವರ್ಷದ ಮಗು ಹಾಗೂ ಪೈಲಟ್ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದರು.
ಪ್ರತಿಕೂಲ ಹವಾಮಾನದ ಕಾರಣದಿಂದ ಗೌರಿಕುಂಡ್ ಹಾಗೂ ತ್ರಿಯುಗಿನಾರಾಯಣ್ ನಡುವಿನ ಗೌರಿ ಮಾಯಿ ಖರ್ಕ್ನ ಅರಣ್ಯದಲ್ಲಿ ಅಪಘಾತಕ್ಕೀಡಾದ ಬೆಲ್ 407 ಹೆಲಿಕಾಪ್ಟರ್ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ.
ಘಟನೆಗೆ ಸಂಬಂಧಿಸಿ ಆರ್ಯನ್ ಏವಿಯೇಷನ್ನ ಹಿರಿಯ ಅಧಿಕಾರಿ ಕೌಶಿಕ್ ಪಾಠಕ್ ಹಾಗೂ ಅಧಿಕಾರಿ ವಿಕಾಸ್ ತೋಮರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ವಿಮಾನ ಕಾಯ್ದೆ 1934ರ ಸೆಕ್ಷನ್ 10ರ ಅಡಿಯಲ್ಲಿ ಸೋನ್ ಪ್ರಯಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೇದಾರನಾಥ್ ದೇವಾಲಯದ ಸಮೀಪದ ಪುಟ್ಟ ಪಟ್ಟಣ ಫಾಟಾದದಲ್ಲಿ ನಿಯೋಜಿತರಾಗಿರುವ ರೆವೆನ್ಯೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜೀವ್ ನಖೋಲಿಯಾ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.





