ಕೇದಾರನಾಥ: ಭೂಕುಸಿತ; ಇಬ್ಬರು ಮೃತ್ಯು

PC : NDTV
ರುದ್ರಪ್ರಯಾಗ (ಉತ್ತರಾಖಂಡ): ಕೇದಾರನಾಥದ ಜಂಗಲ್ ಚಟ್ಟಿ ಘಾಟ್ ನ ಚಾರಣ ಮಾರ್ಗದಲ್ಲಿ ಬುಧವಾರ ಸಂಭವಿಸಿದ ಭೂಕುಸಿತದಲ್ಲಿ ಜನರನ್ನು ಡೋಲಿಯಲ್ಲಿ ಹೊತ್ತು ಸಾಗುವ ಇಬ್ಬರು ಮೃತಪಟ್ಟಿದ್ದಾರೆ.
ಓರ್ವ ಯಾತ್ರಿ ಸೇರಿದಂತೆ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಜಮ್ಮು ಹಾಗೂ ಕಾಶ್ಮೀರದ ದೋಡಾ ಜಿಲ್ಲೆಯ ನಿತಿನ್ ಕುಮಾರ್ ಹಾಗೂ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸಂದೀಪ್ ಕುಮಾರ್ ಹಾಗೂ ನಿತಿನ್ ಮನ್ಹಾಸ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಕೂಡ ಜನರನ್ನು ಡೋಲಿಯಲ್ಲಿ ಹೊತ್ತು ಸಾಗುವ ಕೆಲಸ ನಿರ್ವಹಿಸುತ್ತಿದ್ದರು.
ಗಾಯಗೊಂಡ ಇನ್ನೊಬ್ಬರನ್ನು ಆಕಾಶ್ ಚಿತ್ರಿಯಾ ಎಂದು ಗುರುತಿಸಲಾಗಿದೆ. ಗುಜರಾತ್ ನಿವಾಸಿಯಾಗಿರುವ ಇವರು ಇಲ್ಲಿಗೆ ಯಾತ್ರಿಯಾಗಿ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಂಗಲ್ಚಟ್ಟಿ ಘಾಟ್ನ ಸಮೀಪ ಚಾರಣ ಮಾರ್ಗದಲ್ಲಿ ಬೆಳಗ್ಗೆ 11.20ಕ್ಕೆ ಭೂಕುಸಿತ ಸಂಭವಿಸಿತು. ಮೇಲಿನಿಂದ ಉರುಳಿದ ಬಂಡೆಗಳು ಯಾತ್ರಿಗಳು, ಡೋಲಿ ಹೊರುವವರು ಹಾಗೂ ಪೋರ್ಟರ್ಗಳಿಗೆ ಢಿಕ್ಕಿಯಾಯಿತು ಎಂದು ರುದ್ರಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ.





