ಮೌನವಾಗಿರಿ ಇಲ್ಲದಿದ್ದರೆ, ಈಡಿ ನಿಮ್ಮ ಮನೆಗೆ ಬರಬಹುದು: ವಿಪಕ್ಷಗಳಿಗೆ ಎಚ್ಚರಿಸಿದ ಸಚಿವೆ ಮೀನಾಕ್ಷಿ ಲೇಖಿ

ಹೊಸದಿಲ್ಲಿ: ತಮ್ಮ ಭಾಷಣಕ್ಕೆ ಅಡ್ಡಿಪಡಿಸುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಜಾರಿ ನಿರ್ದೇಶನಾಲಯ (ಈಡಿ) ನಿಮ್ಮ ಮನೆಗಳಿಗೆ ಬರಬಹುದು ಎಂದು ವಿರೋಧ ಪಕ್ಷದ ಸಂಸದರಿಗೆ ಕೇಂದ್ರ ವಿದೇಶಾಂಗ ಹಾಗೂ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ. ಇದಕ್ಕೆ ಆಕ್ಷೇಪ ವ್ಯಕ್ತವಾದಾಗ ತಮಾಷೆಗಾಗಿ ಹೀಗೆ ಹೇಳಿದೆ ಎಂದರು.
ಗುರುವಾರ, ಆಗಸ್ಟ್ 3 ರಂದು ಲೋಕಸಭೆಯಲ್ಲಿ ದಿಲ್ಲಿ ಸೇವೆಗಳ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ವಿರೋಧ ಪಕ್ಷದ ಸಂಸದರಿಗೆ, "ಒಂದು ನಿಮಿಷ ಸುಮ್ಮನಿರಿ. ಸುಮ್ಮನಾಗದಿದ್ದರೆ ಈಡಿ ನಿಮ್ಮ ಮನೆಗೆ ಭೇಟಿ ನೀಡಬಹುದು" ಎಂದು ಬೆದರಿಸಿದರು.
ತನ್ನ ಹೇಳಿಕೆಗೆ ಆಕ್ಷೇಪಣೆಗಳು ವ್ಯಕ್ತವಾದಾಗ, ತನ್ನ ಭಾಷಣವನ್ನು ಮುಂದುವರಿಸುವ ಮೊದಲು ತಮಾಷೆಗಾಗಿ ಈ ಹೇಳಿಕೆಯನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.
ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರಕಾರವನ್ನು ಟೀಕಿಸುವ ಸಂದರ್ಭದಲ್ಲಿ ಕೇಂದ್ರ ಸರಕಾರದ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ತಿದ್ದುಪಡಿ) ಮಸೂದೆಯನ್ನು ಲೇಖಿ ಸಮರ್ಥಿಸಿಕೊಂಡರು,
ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ನಂತರ ಲೋಕಸಭೆಯು ಗುರುವಾರ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರದ (ತಿದ್ದುಪಡಿ) ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು.







