ಟ್ರಂಪ್ ಓಲೈಕೆಗಾಗಿ ಮೋದಿ ದೇಶದ ಹತ್ತಿ ಕೃಷಿಕರ ಹಿತಾಸಕ್ತಿಯನ್ನು ಪಣಕ್ಕಿಡಲಿದ್ದಾರೆ: ಕೇಜ್ರಿವಾಲ್ ಖಂಡನೆ

ಅರವಿಂದ್ ಕೇಜ್ರಿವಾಲ್ | PC : PTI
ಹೊಸದಿಲ್ಲಿ, ಸೆ.10: ಭಾರತ ಹಾಗೂ ಅಮೆರಿಕ ನಡುವಣ ವಾಣಿಜ್ಯ ಮಾತುಕತೆಗಳು ಉಭಯದೇಶಗಳ ಪಾಲುದಾರಿಕೆಗೆ ಅಪರಿಮಿತ ಅವಕಾಶಗಳನ್ನು ತೆರೆದಿಡಲಿದೆಯೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಕಟುವಾಗಿ ಟೀಕಿಸಿದ್ದಾರೆ.
ಟ್ರಂಪ್ ರನ್ನು ಸಂತುಷ್ಟಗೊಳಿಸಲು ದೇಶಾದ್ಯಂತದ ಹತ್ತಿ ಕೃಷಿಕರನ್ನು ಪಣಕ್ಕಿಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘‘ಉಭಯದೇಶಗಳ ನಡುವೆ ಯಾವ ರೀತಿಯ ಮಾತುಕತೆಗಳು ನಡೆಯುತ್ತಿವೆ? ಅವು ಏಕಪಕ್ಷೀಯ ಮಾತುಕತೆಗಳೇ? ನಮ್ಮ ರೈತರು, ವ್ಯಾಪಾರಿಗಳು ಹಾಗೂ ಯುವಜನರ ಉದ್ಯೋಗದ ಹಿತಾಸಕ್ತಿಗಳನ್ನು ಬದಿಗೊತ್ತಿ, ಭಾರತೀಯ ಮಾರುಕಟ್ಟೆಯನ್ನು ಅಮೆರಿಕನ್ನರಿಗೆ ಸಂಪೂರ್ಣವಾಗಿ ತೆರೆದಿಡಲಿದೆ. ಒಂದು ವೇಳೆ ಸಮಗ್ರ ಭಾರತೀಯ ಮಾರುಕಟ್ಟೆಯು ಅಮೆರಿಕನ್ನರ ನಿಯಂತ್ರಣಕ್ಕೆ ಒಳಪಟ್ಟಲ್ಲಿ, ನಮ್ಮ ಜನರು ಎಲ್ಲಿಗೆ ಹೋಗಬೇಕಾಗುತ್ತದೆ’’ ಎಂದು ಅವರು ಪ್ರಶ್ನಿಸಿದ್ದಾರೆ.
ಮೋದಿಯವರ ಇಂತಹ ಹೇಳಿಕೆಗಳು ಅಮೆರಿಕದ ಮುಂದೆ ಶರಣಾಗತಿಗೆ ಸಮಾನವಾದುದಾಗಿದೆ ಎಂದು ಕೇಜ್ರಿವಾಲ್ ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಟ್ರಂಪ್ ಅವರ ಮುಂದೆ ಇಂತಹ ಶರಣಾಗತಿಯು ಭಾರತದ ಆರ್ಥಿಕತೆಗೆ ಮಾರಕ ಮಾತ್ರವಲ್ಲ, 140 ಕೋಟಿ ಭಾರತೀಯರಿಗಾದ ಅಪಮಾನಾಗಿದೆ. ಪ್ರಧಾನಿಯವರು ದೇಶದ ಗೌರವವನ್ನು ರಕ್ಷಿಸಬೇಕೇ ಹೊರತು ದುರ್ಬಲಗೊಳಿಸಕೂಡದು’’ ಎಂದವರು ಆಗ್ರಹಿಸಿದ್ದಾರೆ.





