ವಿಜಯ ನಾಯರ್ ಕುರಿತು ಪ್ರಶ್ನೆಗೆ ಕೇಜ್ರಿವಾಲ್ ಅತಿಶಿ, ಸೌರಭ್ ಭಾರದ್ವಾಜ್ ರನ್ನು ಹೆಸರಿಸಿದ್ದಾರೆ | ನ್ಯಾಯಾಲಯಕ್ಕೆ ತಿಳಿಸಿದ ಈಡಿ

Photo: PTI
ಹೊಸದಿಲ್ಲಿ : ಅಬಕಾರಿ ನೀತಿ ಹಗರಣದ ಆರೋಪಿ ವಿಜಯ ನಾಯರ್, ಸಚಿವೆ ಅತಿಶಿಯವರಿಗೆ ವರದಿ ಮಾಡಿಕೊಳ್ಳುತ್ತಿದ್ದರು ಎಂದು ದಿಲ್ಲಿ ಮುಖ್ಯಮಂತ್ರಿ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಈಡಿ)ವು ಸೋಮವಾರ ಇಲ್ಲಿಯ ರೋಸ್ ಅವೆನ್ಯು ನ್ಯಾಯಾಲಯದಲ್ಲಿ ಹೇಳಿದೆ.
ಕೇಜ್ರಿವಾಲ್ ಇನ್ನೋರ್ವ ಸಚಿವ ಸೌರಭ ಭಾರದ್ವಾಜ್ರನ್ನೂ ಹೆಸರಿಸಿದ್ದಾರೆ ಎಂದು ಈಡಿ ತಿಳಿಸಿದೆ. ನಾಯರ್ ಈ ಹಿಂದೆ ಆಪ್ ನ ಮಾಧ್ಯಮ ಸಂವಹನ ಘಟಕದ ಮುಖ್ಯಸ್ಥರಾಗಿದ್ದರು.
ಈಡಿ ಇನ್ನಷ್ಟು ಕಸ್ಟಡಿಯನ್ನು ಕೋರುವುದಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಸೋಮವಾರ ತಿಳಿಸಿದ ಬಳಿಕ ನ್ಯಾಯಾಲಯವು ಕೇಜ್ರಿವಾಲ್ ಅವರಿಗೆ ಎ.15ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು.
ಸರಕಾರಿ ಸಾಕ್ಷಿಯಾಗುವವರೆಗೂ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನಾಯರ್ ಮದ್ಯ ವ್ಯವಹಾರದಲ್ಲಿ ಭಾಗಿಯಾಗಿದ್ದ ಸಹ ಆರೋಪಿಗಳೊಂದಿಗೆ 10ಕ್ಕೂ ಹೆಚ್ಚು ಸಭೆಗಳನ್ನು ಏಕೆ ನಡೆಸಿದ್ದರು ಎನ್ನುವುದನ್ನು ವಿವರಿಸಲು ಕೇಜ್ರಿವಾಲ್ ವಿಫಲಗೊಂಡಿದ್ದಾರೆ. ಇದಕ್ಕೆ ಮತ್ತು ಇತರ ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ಅವರು ನುಣುಚಿಕೊಂಡಿದ್ದಾರೆ ಎಂದು ಈಡಿ ನ್ಯಾಯಾಲಯಕ್ಕೆ ತಿಳಿಸಿದೆ.
ವಿಜಯ ನಾಯರ್ ಕೇಜ್ರಿವಾಲ್ ಅವರಿಗೆ ನಿಕಟರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ ಕೇಜ್ರಿವಾಲ್ ನಾಯರ್ ತನಗೆ ವರದಿ ಮಾಡಿಕೊಳ್ಳುತ್ತಿರಲಿಲ್ಲ, ಅವರು ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರಿಗೆ ವರದಿ ಮಾಡಿಕೊಳ್ಳುತ್ತಿದ್ದರು ಎಂದು ಈಡಿ ತಿಳಿಸಿದೆ.







