ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಕೆನ್ಯಾ ರಾಜತಾಂತ್ರಿಕನ ಪುತ್ರನಿಗೆ ಕಾನೂನು ಕ್ರಮದಿಂದ ವಿನಾಯಿತಿ
ಹಿಂದೆಗೆದುಕೊಳ್ಳುವಂತೆ ಭಾರತದ ಆಗ್ರಹ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಳೆದ ಆಗಸ್ಟ್ ನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ವಿಚಾರಣೆಗೊಳಪಡಿಸಲು ಕೆನ್ಯಾದ ರಾಜತಾಂತ್ರಿಕರ ಪುತ್ರನ ಕಾನೂನು ರಕ್ಷಣೆಯನ್ನು ಹಿಂದೆಗೆದುಕೊಳ್ಳುವಂತೆ ಭಾರತವು ಶುಕ್ರವಾರ ಆ ದೇಶದ ಸರಕಾರಕ್ಕೆ ಆಗ್ರಹಿಸಿದೆ.
‘ಪ್ರಕರಣದಲ್ಲಿ ತನಿಖೆ ಮುಂದುವರಿಯುವಂತಾಗಲು ಸಂಬಂಧಿಸಿದ ವ್ಯಕ್ತಿಯ ರಾಜತಾಂತ್ರಿಕ ವಿನಾಯಿತಿಯನ್ನು ಮನ್ನಾ ಮಾಡುವಂತೆ ನಾವು ಕೆನ್ಯಾ ಸರಕಾರವನ್ನು ಆಗ್ರಹಿಸಿದ್ದು, ಈ ಬಗ್ಗೆ ಅದರೊಂದಿಗೆ ಮಾತುಕತೆಗಳನ್ನು ಮುಂದುವರಿಸಿದ್ದೇವೆ ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು.
ದಕ್ಷಿಣ ದಿಲ್ಲಿಯ ಶಾಲೆಯೊಂದರಲ್ಲಿ ಓದುತ್ತಿರುವ 12ನೇ ತರಗತಿಯ ವಿದ್ಯಾರ್ಥಿಯು ಕಳೆದ ಆಗಸ್ಟ್ನಲ್ಲಿ ಶಾಲಾ ಬಸ್ನಲ್ಲಿ ಐದರ ಹರೆಯದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯಾಗಿದ್ದಾನೆ. ಸೆಪ್ಟಂಬರ್ನಲ್ಲಿ ಬಾಲಕಿಯು ಆಗಾಗ್ಗೆ ಮೂತ್ರ ವಿಸರ್ಜನೆಯ ಬಗ್ಗೆ ದೂರಿಕೊಂಡಾಗ ಆಕೆಯ ಪೋಷಕರಿಗೆ ಈ ವಿಷಯ ಗೊತ್ತಾಗಿತ್ತು. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು.
ಸೆ.19ರಂದು ಎಫ್ಐಆರ್ ದಾಖಲಾದಾಗ ಆರಂಭದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಗೆ ಆರೋಪಿಯ ಹೆಸರನ್ನು ಹೇಳಲು ಸಾಧ್ಯವಾಗಿರಲಿಲ್ಲ. ನವಂಬರ್ನಲ್ಲಿ ಆಕೆ ಕೆನ್ಯಾ ರಾಜತಾಂತ್ರಿಕರ ಮಗನನ್ನು ಆರೋಪಿಯೆಂದು ಗುರುತಿಸಿದ್ದಳು.
ವಯಸ್ಕ ಎಂದು ಭಾವಿಸಲಾಗಿರುವ 12ನೇ ತರಗತಿಯ ವಿದ್ಯಾರ್ಥಿ ವಿರುದ್ಧ ಪೊಕ್ಸೊ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಬಾಲಕಿಯ ಕುಟುಂಬ ಮತ್ತು ಶಾಲೆಯಲ್ಲಿ ಓದುತ್ತಿರುವ ಇತರ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದ ಬಳಿಕ ಫೆಬ್ರವರಿ ಆರಂಭದಲ್ಲಿ ಆರೋಪಿಯನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ. ಆದರೆ ಅಂತರರಾಷ್ಟ್ರೀಯ ಕಾನೂನಿನಡಿ ವಿದೇಶಗಳಲ್ಲಿರುವ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಕಾನೂನು ಕ್ರಮದಿಂದ ರಕ್ಷಣೆಯನ್ನು ಹೊಂದಿರುವುದರಿಂದ ತನಿಖೆಯು ಮುಂದುವರಿದಿಲ್ಲ.
1961ರ ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ನಿರ್ಣಯವು, ಕಾನೂನು ಕ್ರಮದಿಂದ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಹೊಂದಿರುವ ರಕ್ಷಣೆಯನ್ನು ಅವರನ್ನು ಕಳುಹಿಸಿರುವ ದೇಶಗಳು ರದ್ದು ಮಾಡಬಹುದು ಎಂದು ಹೇಳುತ್ತದೆ.







