ಕೇರಳದಲ್ಲಿ ಕಾಡಾನೆಯ ದಾಳಿಗೆ ಯುವಕನ ಬಲಿ: ಪ್ರತಿಪಕ್ಷದಿಂದ ಸರಕಾರದ ನಿಷ್ಕ್ರಿಯತೆ ಆರೋಪ

ಸಾಂದರ್ಭಿಕ ಚಿತ್ರ | PC : PTI
ವಯನಾಡ್: ವಯನಾಡ್ ಜಿಲ್ಲೆಯಲ್ಲಿ ಬುಧವಾರ ನಸುಕಿನಲ್ಲಿ ಕಾಡಾನೆಯ ದಾಳಿಗೆ 27ರ ಹರೆಯದ ಯುವಕನೋರ್ವ ಬಲಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಕಳೆದ ವರ್ಷದ ಜುಲೈನಲ್ಲಿ ಹಲವಾರು ಜೀವಗಳನ್ನು ಬಲಿ ಪಡೆದಿದ್ದ ಭೂಕುಸಿತಗಳು ಸಂಭವಿಸಿದ್ದ ಚೂರಲ್ಮಲಾ ಸಮೀಪದ ಅಟ್ಟಮಲಾದ ಬುಡಕಟ್ಟು ವಸತಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಮೃತ ಯುವಕನನ್ನು ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಲಕೃಷ್ಣನ್ ಎಂದು ಗುರುತಿಸಲಾಗಿದ್ದು,ಬುಧವಾರ ನಸುಕಿನ ಮೂರು ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಈ ನಡುವೆ ವನ್ಯಪ್ರಾಣಿಗಳ ದಾಳಿಗಳಿಂದ ತಮ್ಮನ್ನು ರಕ್ಷಿಸಲು ಉಪಕ್ರಮಗಳ ಕೊರತೆಯ ವಿರುದ್ಧ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳು ಇಂತಹ ದಾಳಿಗಳನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡುವವರೆಗೆ ಮತ್ತು ಮೃತವ್ಯಕ್ತಿಯ ಕುಟುಂಬಕ್ಕೆ ಪರಿಹಾರವನ್ನು ಒದಗಿಸುವವರೆಗೆ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಅವಕಾಶ ನೀಡಲಿಲ್ಲ.
10 ಲ.ರೂ.ಗಳ ಪರಿಹಾರ,ಅವಲಂಬಿತ ವ್ಯಕ್ತಿಗೆ ಸರಕಾರಿ ಉದ್ಯೋಗ ಮತ್ತು ಬಾಲಕೃಷ್ಣನ್ ಅಂತ್ಯಸಂಸ್ಕಾರಕ್ಕೆ ಆರ್ಥಿಕ ನೆರವಿಗಾಗಿ ಅವರು ಆಗ್ರಹಿಸಿದರು.
ಮೊದಲ ಹೆಜ್ಜೆಯಾಗಿ ಅರಣ್ಯ ಇಲಾಖೆಯು ಮೃತನ ಕುಟುಂಬಕ್ಕೆ ಐದು ಲ.ರೂ.ಗಳನ್ನು ಬುಧವಾರವೇ ಹಸ್ತಾಂತರಿಸಲಿದೆ. ಬುಡಕಟ್ಟು ಇಲಾಖೆಯು ಅಂತ್ಯಸಂಸ್ಕಾರವನ್ನು ನಡೆಸಲು ಎಲ್ಲ ಅಗತ್ಯ ನೆರವುಗಳನ್ನು ಒದಗಿಸಲಿದೆ ಎಂದು ವೈತಿರಿ ತಾಲೂಕು ತಹಶೀಲ್ದಾರರು ತಿಳಿಸಿದರು. ಉಳಿದ ಐದು ಲ.ರೂ.ಗಳನ್ನು ಶೀಘ್ರವೇ ಸಂತ್ರಸ್ತ ಕುಟುಂಬಕ್ಕೆ ಪಾವತಿಸಲಾಗುವುದು ಎಂದರು.
ತಹಶೀಲ್ದಾರ್ ಭರವಸೆಯ ಬಳಿಕ ಪ್ರತಿಭಟನಾಕಾರರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುಲ್ತಾನ್ ಬತೇರಿಯ ಸರಕಾರಿ ಆಸ್ಪತ್ರೆಗೆ ಸಾಗಿಸಲು ಅವಕಾಶ ನೀಡಿದರು.
ಅರಣ್ಯದ ಅಂಚಿನ ಪ್ರದೇಶಗಳ ನಿವಾಸಿಗಳು ಹೊತ್ತಲ್ಲದ ಹೊತ್ತಿನಲ್ಲಿ ತಮ್ಮ ಮನೆಗಳಿಂದ ಹೊರಹೋಗಬಾರದು ಎಂದು ಅರಣ್ಯಾಧಿಕಾರಿಯೋರ್ವರು ತಿಳಿಸಿದರು.
ಕಾಡಾನೆಗಳು ನಿಯಮಿತವಾಗಿ ಮುಂಡಕ್ಕೈನ ವಸತಿ ಪ್ರದೇಶಗಳನ್ನು ಪ್ರವೇಶಿಸುತ್ತವೆ ಮತ್ತು ಬೆಳೆಗಳನ್ನು ಧ್ವಂಸಗೊಳಿಸುತ್ತವೆ ಎಂದು ದೂರಿರುವ ಸ್ಥಳೀಯರು,ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಮಂಗಳವಾರವಷ್ಟೇ ಜಿಲ್ಲೆಯ ಕೇರಳ-ತಮಿಳುನಾಡು ಗಡಿಯಲ್ಲಿರುವ ನೂಲಪುಳ ಗ್ರಾಮದಲ್ಲಿಯ ಅರಣ್ಯದ ಅಂಚಿನ ಪ್ರದೇಶದಲ್ಲಿ ಕಾಡಾನೆಯೊಂದು 45ರ ಹರೆಯದ ವ್ಯಕ್ತಿಯನ್ನು ಕೊಂದಿತ್ತು.
ಈ ನಡುವೆ ಜನರನ್ನು ವನ್ಯ ಪ್ರಾಣಿಗಳಿಂದ ರಕ್ಷಿಸಲು ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಸ್ಥಳೀಯ ನಾಯಕತ್ವವು ಗುರುವಾರ ವಯನಾಡ ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಿದೆ.
ವನ್ಯ ಪ್ರಾಣಿಗಳ ದಾಳಿಗಳಿಗೆ ಆಗಾಗ್ಗೆ ಮಾನವ ಜೀವಗಳು ಬಲಿಯಾಗುತ್ತಿದ್ದರೂ ಸರಕಾರದ ನಿಷ್ಕ್ರಿಯತೆಯ ವಿರುದ್ಧ ಹರತಾಳಕ್ಕೆ ಕರೆ ನೀಡಲಾಗಿದೆ ಎಂದು ಯುಡಿಎಫ್ ಜಿಲ್ಲಾಧ್ಯಕ್ಷ ಕೆ.ಕೆ.ಅಹ್ಮದ್ ಹಾಜಿ ಮತ್ತು ಸಂಚಾಲಕ ಪಿ.ಟಿ. ಗೋಪಾಲ ಕುರುಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅತ್ತ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು,ರಾಜ್ಯದ ಗುಡ್ಡಗಾಡು ಪ್ರದೇಶಗಳಿಂದ ಆಘಾತಕಾರಿ ಸುದ್ದಿಗಳು ನಿರಂತರವಾಗಿ ಬರುತ್ತಿವೆ. ಕಳೆದ ಮೂರು ದಿನಗಳಲ್ಲೇ ನಾಲ್ವರು ಕಾಡಾನೆಗಳ ದಾಳಿಗೆ ಬಲಿಯಾಗಿದ್ದಾರೆ. ಕೇವಲ ಒಂದು ವಾರದಲ್ಲಿ ಐವರು ಮೃತಪಟ್ಟಿದ್ದಾರೆ. ತುರ್ತು ಕ್ರಮಗಳಿಗಾಗಿ ಪದೇ ಪದೇ ಆಗ್ರಹಿಸಿದ್ದರೂ ಸರಕಾರವು ಏನನ್ನೂ ಮಾಡಿಲ್ಲ. ಸರಕಾರದ ನಿಲುವಿನಿಂದಾಗಿ ಅರಣ್ಯಗಳ ಅಂಚುಗಳಲ್ಲಿ ವಾಸವಾಗಿರುವ ಜನರ ರಕ್ಷಣೆಯ ಹೊಣೆಯನ್ನು ಅವರಿಗೇ ಬಿಟ್ಟಂತಾಗಿದೆ ಎಂದು ಹೇಳಿದರು.
*******







