ಕೇರಳ: ತಾಳಿ ಕಟ್ಟಿಸಿಕೊಳ್ಳಲು ತಯಾರಾಗಿದ್ದ 'ವಧು' ಪೊಲೀಸ್ ವಶಕ್ಕೆ; 14 ನೇ ಮದುವೆಗೆ ಸಿದ್ಧಗೊಂಡಿದ್ದ ಯುವತಿಗೆ ಕಂಟಕವಾದ 'ವರ'

ಸಾಂದರ್ಭಿಕ ಚಿತ್ರ | PC : freepik.com
ತಿರುವನಂತಪುರಂ: 10 ಕ್ಕೂ ಅಧಿಕ ಬಾರಿ ಮದುವೆಯಾಗಿ ವಂಚನೆಗೈಯುತ್ತಿದ್ದ ಎರ್ನಾಕುಲಂನ ಕಂಜಿರಮಟ್ಟಂ ಮೂಲದ ರೇಷ್ಮಾ (30) ಎಂಬಾಕೆಯನ್ನು ಆರ್ಯನಾಡು ಪೊಲೀಸರು ನಾಟಕೀಯ ಶೈಲಿಯಲ್ಲಿ ಬಂಧಿಸಿದ್ದಾರೆ.
14 ನೇ ಬಾರಿ ಮದುವೆಯಾಗಲು ಸನ್ನದ್ಧವಾಗಿದ್ದ ರೇಷ್ಮಾಳನ್ನು ಆಕೆಯ ಭಾವಿ ಪತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ತಾಳಿ ಕಟ್ಟಲು ನೇರವಾಗಿ ಮದುವೆ ಮಂಟಪಕ್ಕೆ ತೆರಳಲು ಸನ್ನದ್ಧವಾಗಿದ್ದ ವೇಳೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ರೇಷ್ಮಾ ತಾನು ಹಲವು ಬಾರಿ ಮದುವೆಯಾಗಿರುವುದಾಗಿ ಬಹಿರಂಗಪಡಿಸಿದ್ದಾಳೆ. ಒಂದು ಸಂಬಂಧದಲ್ಲಿ ಆಕೆಗೆ ಮಗುವೂ ಇದೆ.
ವರನ ಕುಟುಂಬಕ್ಕೆ ತನ್ನನ್ನು ತಾನು ಅನಾಥೆ ಎಂದು ಪರಿಚಯಿಸುವ ಮೂಲಕ ಆಕೆ ಮೋಸದ ಜಾಲವನ್ನು ಪ್ರಾರಂಭಿಸುತ್ತಾಳೆ. ನಂತರ ಮದುವೆಗೆ ತನ್ನ ಬಟ್ಟೆ ಮತ್ತು ಚಿನ್ನವನ್ನು ವರನಿಂದಲೇ ಖರೀದಿಸುತ್ತಿದ್ದ ಆಕೆ, ಮದುವೆಯಾದ ಕೆಲವೇ ದಿನಗಳಲ್ಲಿ ಚಿನ್ನಾಭರಣ, ವಸ್ತ್ರಗಳೊಂದಿಗೆ ಪರಾರಿಯಾಗುತ್ತಿದ್ದಳು.
ಒಂದು ಅಥವಾ ಎರಡು ತಿಂಗಳುಗಳ ಬಳಿಕ ಆಕೆ ಮತ್ತೆ ಬೇರೆ ವರನೊಂದಿಗೆ ಮದುವೆಗೆ ತಯಾರುಗುತ್ತಿದ್ದಳು.
ರೇಷ್ಮಾಳ ಮೊದಲ ಮದುವೆ 2014 ರಲ್ಲಿ ನಡೆದಿದ್ದು, 2022 ರಿಂದ ಆಕೆ ವಿವಿಧ ಜಿಲ್ಲೆಗಳಲ್ಲಿ ಆರು ಜನರನ್ನು ಮದುವೆಯಾಗಿದ್ದಾಳೆ. ಪ್ರತಿ ವರನಿಗೆ, ಅವಳು ಅದೇ ಅನಾಥ ಕಥೆಯನ್ನು ಹೇಳುತ್ತಿದ್ದಳು ಎಂದು ಪೊಲೀಸ್ ಮೂಲಗಳು ಹೇಳಿವೆ.
ಅದಾಗ್ಯೂ, ಹಣದ ಆಸೆಯಿಂದಲ್ಲ, ಪ್ರೀತಿಯ ಹುಡುಕಾಟವೇ ತನ್ನನ್ನು ಹಲವು ಬಾರಿ ಮದುವೆಯಾಗುವಂತೆ ಮಾಡಿದೆ ಎಂದು ರೇಷ್ಮಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಳಾದರೂ, ಪೊಲೀಸರು ಆಕೆಯ ಈ ಹೇಳಿಕೆಗಳನ್ನು ನಂಬಿಕೆಗೆ ತೆಗೆದುಕೊಂಡಿಲ್ಲ.
ರೇಷ್ಮಾ 45 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ಮೋಸಗೊಳಿಸಿ ಪಂಚಾಯತ್ ಸದಸ್ಯನನ್ನು ಮದುವೆಯಾಗಲು ಮುಂದಾಗಿದ್ದಳು. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಜುಲೈನಲ್ಲಿ ತಿರುವನಂತಪುರಂ ಮೂಲದ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಕೂಡಾ ಆಕೆ ತಯಾರಿ ನಡೆಸಿದ್ದಳು.
ಆಕೆಯ ಭಾವೀ ಪತಿ ಮತ್ತು ಆತನ ಸಂಬಂಧಿಗೆ ಆಕೆಯ ನಡೆ ಅನುಮಾನಸ್ಪದವಾಗಿ ಕಂಡು ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.