ಕೇರಳ | ಸಮುದ್ರದಲ್ಲಿ ಸಿಲುಕಿಕೊಂಡಿರುವ ಸರಕು ಹಡಗಿನಲ್ಲಿ ಮುಂದುವರಿದ ಸ್ಫೋಟ, ಬೆಂಕಿ

PC : X
ತಿರುವನಂತಪುರಂ: ಕೇರಳ ಕರಾವಳಿಯ ಸಮುದ್ರದಲ್ಲಿ ಸಿಲುಕಿಕೊಂಡಿರುವ ಸಿಂಗಾಪುರದ ಸರಕು ಹಡಗಿನಲ್ಲಿ ಸ್ಫೋಟಗಳು ಮುಂದುವರಿದಿವೆ ಮತ್ತು ಜ್ವಾಲೆಗಳು ನಿರಂತರವಾಗಿ ಮೇಲೇಳುತ್ತಿವೆ. ಈ ಹಡಗಿನಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ನಂದಿಸಲು ರಕ್ಷಣಾ ಪಡೆಯ ನೌಕೆಗಳಾದ ಸಮುದ್ರ ಪ್ರಹಾರಿ ಮತ್ತು ಸಾಚೇತ್ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ.
ಹಡಗಿನ ಮುಂಭಾಗದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ, ಉಳಿದ ಭಾಗಗಳಲ್ಲಿ ಬೆಂಕಿಯು ಈಗಲೂ ಉರಿಯುತ್ತಿದೆ ಎಂದು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ತಿಳಿಸಿದ್ದಾರೆ.
‘ಎಮ್ವಿ ವಾನ್ ಹೈ 504’ ಹಡಗು ಸೋಮವಾರ ಕೊಲಂಬೊದಿಂದ ನವಿ ಮುಂಬೈಗೆ ಸಾಗುತ್ತಿದ್ದಾಗ ಕಣ್ಣೂರು ಕರಾವಳಿಯ ಅಳೀಕಲ್ನಿಂದ ಸುಮಾರು 44 ನಾಟಿಕಲ್ ಮೈಲಿ ದೂರದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅದು ಬಳಿಕ 10ರಿಂದ 15 ಡಿಗ್ರಿ ವಾಲಿ ನಿಂತಿದೆ.
‘‘ರಕ್ಷಣಾ ಪಡೆಯ ನೌಕೆಗಳಾದ ಸಮುದ್ರ ಪ್ರಹಾರಿ ಮತ್ತು ಸಾಚೇತ್ ಅಗ್ನಿಶಾಮಕ ಕಾರ್ಯಾಚರಣೆ ನಡೆಸುತ್ತಿದ್ದರೆ, ರಕ್ಷಣಾ ಪಡೆಯ ಇನ್ನೊಂದು ಹಡಗು ಸಮರ್ಥ ಮತ್ತು ಇತರ ಹಡಗುಗಳನ್ನು ಕೊಚ್ಚಿಯಿಂದ ಕಳುಹಿಸಲಾಗುತ್ತಿದೆ’’ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.
ಹಡಗಿನಲ್ಲಿದ್ದ 22 ಸಿಬ್ಬಂದಿ ಪೈಕಿ 18 ಮಂದಿಯನ್ನು ರಕ್ಷಿಸಲಾಗಿದೆ. ನಾಲ್ವರು ನಾಪತ್ತೆಯಾಗಿದ್ದಾರೆ. ರಕ್ಷಿಸಲ್ಪಟ್ಟಿರುವ 18 ಮಂದಿಯ ಪೈಕಿ ಆರು ಮಂದಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಸರಕು ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ವಿದೇಶೀಯರಾಗಿದ್ದಾರೆ.
ಹಡಗು ದಹನಶೀಲ ಘನ, ದ್ರವ ಮತ್ತು ವಿಷಕಾರಿ ಸರಕುಗಳನ್ನು ಸಾಗಿಸುತ್ತಿತ್ತು ಎಂದು ಅಳಿಕ್ಕಲ್ ಬಂದರಿನ ಅಧಿಕಾರಿಯೊಬ್ಬರು ತಿಳಿಸಿದರು.