ಕೇರಳ: ಮೆದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿದ್ದ ಮತ್ತೋರ್ವ ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ
ಕೋಝಿಕ್ಕೋಡ್, ಸೆ. 11: ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಅಪರೂಪದ ಹಾಗೂ ಮಾರಕ ಮೆದುಳು ಸೋಂಕಿಗೆ ಮತ್ತೋರ್ವರು ಮೃತಪಟ್ಟಿದ್ದು, ಮಾರಕ ಮೆದುಳು ಸೋಂಕಿಗೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಚೆಲಂಬ್ರಾದ ಶಾಜಿ (47) ಮೆದುಳು ಸೋಂಕಿಗೆ ಬಲಿಯಾದವರು.
ಶಾಜಿ ಅವರನ್ನು ಆಗಸ್ಟ್ 9ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಯಿತು ಹಾಗೂ ಗುರುವಾರ ಬೆಳಗ್ಗೆ ಅವರು ಮೃತಪಟ್ಟರು. ಅಗತ್ಯದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಲುಷಿತ ನೀರಿನಲ್ಲಿ ಕಂಡು ಬರುವ ಅಮೀಬಾದಿಂದ ಉಂಟಾಗುವ ಮೆದುಳಿನ ಸೋಂಕು ಅವರಿಗೆ ಹೇಗೆ ತಗುಲಿತು ಎಂದು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಪ್ರಸಕ್ತ ಈ ಸೋಂಕಿಗೆ ಒಳಗಾದ 10 ರೋಗಿಗಳು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮಲಪ್ಪುರಂ ಜಿಲ್ಲೆಯ ವಂಡೂರಿನ 54 ವರ್ಷದ ಮಹಿಳೆ ಇದೇ ಸೋಂಕಿನಿಂದ ಮೃತಪಟ್ಟಿದ್ದರು. ಜುಲೈನಿಂದ ಮೆದುಳು ಜ್ವರದ ಪ್ರಕರಣಗಳು ಆಗಾಗ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಭಾವಿಗಳು ಹಾಗೂ ಕೆರೆಗಳಿಗೆ ಕ್ಲೋರಿನ್ ಬೆರೆಸುವುದು ಸೇರಿದಂತೆ ಸ್ವಚ್ಛತಾ ಅಭಿಯಾನ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







