ಕೇರಳ | ಲೈಂಗಿಕ ದೌರ್ಜನ್ಯ; ಪೊಕ್ಸೊ ಪ್ರಕರಣದಲ್ಲಿ ಬಿಜೆಪಿ ನಾಯಕ ಕೆ.ಪದ್ಮರಾಜನ್ಗೆ ಜೀವನಪರ್ಯಂತ ಶಿಕ್ಷೆ

Photo Credit : maktoobmedia.com
ತಿರುವನಂತಪುರಂ : ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗೂ ಶಾಲಾ ಶಿಕ್ಷಕ ಕೆ.ಪದ್ಮರಾಜನ್ ಎಂಬಾತನನ್ನು ದೋಷಿ ಎಂದು ಘೋಷಿಸಿರುವ ತಲಸ್ಸೇರಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಎಂ.ಟಿ.ಜಲಜಾರಾಣಿ, ಆತನಿಗೆ ನೈಸರ್ಗಿಕವಾಗಿ ಸಾಯುವವರೆಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಪಪ್ಪನ್ ಮಾಸ್ಟರ್ ಎಂದೂ ಹೆಸರಾಗಿರುವ ಕೆ.ಪದ್ಮರಾಜನ್ ವಿರುದ್ಧ 2020ರಲ್ಲಿ ದಾಖಲಾಗಿದ್ದ ಪೊಕ್ಸೊ ಪ್ರಕರಣದಲ್ಲಿ ಆತನನ್ನು ದೋಷಿ ಎಂದು ಘೋಷಿಸಿರುವ ನ್ಯಾಯಾಧೀಶೆ ಜಲಜಾರಾಣಿ, ಆತನಿಗೆ ಒಂದು ಲಕ್ಷ ರೂ. ದಂಡವನ್ನೂ ವಿಧಿಸಿದ್ದಾರೆ. ಒಂದು ವೇಳೆ ಈ ದಂಡವನ್ನು ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ, ಒಂದು ವರ್ಷ ಹೆಚ್ಚುವರಿ ಶಿಕ್ಷೆಯನ್ನೂ ಅನುಭವಿಸಬೇಕು ಎಂದೂ ಆದೇಶಿಸಿದ್ದಾರೆ.
ಈ ಶಿಕ್ಷೆಯೊಂದಿಗೆ, ಎರಡು ಪ್ರತ್ಯೇಕ ಪೊಕ್ಸೊ ಪ್ರಕರಣಗಳಲ್ಲಿ ಆತ 40 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಿದೆ ಹಾಗೂ ಒಂದು ಲಕ್ಷ ರೂ. ದಂಡವನ್ನೂ ಪಾವತಿಸಬೇಕಿದೆ. ಇದರಿಂದ ಒಟ್ಟು ದಂಡದ ಮೊತ್ತ ಎರಡು ಲಕ್ಷ ರೂ. ಆಗಲಿದೆ.
49 ವರ್ಷದ ಅಪರಾಧಿ ಕೆ.ಪದ್ಮರಾಜನ್ ತಿಪ್ಪನ್ಗೊಟ್ಟೂರ್ ಪಂಚಾಯತಿಯ ಮಾಜಿ ಬಿಜೆಪಿ ಅಧ್ಯಕ್ಷನಾಗಿದ್ದು, ಆತ ಸಂಘ ಪರಿವಾರ ಶಿಕ್ಷಕರ ಸಂಘಟನೆಯ ಅಧ್ಯಕ್ಷನೂ ಆಗಿದ್ದ. ಅಪರಾಧಿ ಕೆ.ಪದ್ಮರಾಜನ್ ಉದ್ಯೋಗ ಮಾಡುತ್ತಿದ್ದ ಶಾಲೆಯಲ್ಲೇ 10 ವರ್ಷದ ಸಂತ್ರಸ್ತ ಬಾಲಕಿಯೂ ವ್ಯಾಸಂಗ ಮಾಡುತ್ತಿದ್ದಳು. ಅಪರಾಧಿ ಕೆ.ಪದ್ಮರಾಜನ್ ತಮ್ಮ ಪುತ್ರಿಯ ಮೇಲೆ ಶಾಲಾ ಶೌಚಾಲಯದಲ್ಲಿ ಸೇರಿದಂತೆ ಹಲವೆಡೆ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ದೂರುದಾರರು ಆರೋಪಿಸಿದ್ದರು.







