ಕೇರಳ | ಎಸ್ಐಆರ್ ಸಂಬಂಧಿಸಿದ ಕೆಲಸದ ಒತ್ತಡ; ಆತ್ಮಹತ್ಯೆ ಶರಣಾದ ಬಿಎಲ್ಒ

ಕಣ್ಣೂರು, ನ. 16: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಭಾಗವಾಗಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯ ನೌಕರರೊಬ್ಬರ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪಯ್ಯನ್ನೂರಿನಲ್ಲಿರುವ ಅವರ ಮನೆಯಲ್ಲಿ ರವಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೈದ ನೌಕರನನ್ನು ಅನೀಶ್ ಜಾರ್ಜ್ (44) ಎಂದು ಗುರುತಿಸಲಾಗಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಗೆ ಸಂಬಂಧಿಸಿದ ಕೆಲಸದ ಒತ್ತಡದಿಂದ ಅನೀಶ್ ಜಾರ್ಜ್ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.
ಅನೀಶ್ ಜಾರ್ಜ್ ಅವರು ಪಯ್ಯನ್ನೂರಿನ ಸರಕಾರಿ ಶಾಲೆಯಲ್ಲಿ ಜವಾನನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೃತದೇಹ ಪಯ್ಯನ್ನೂರಿನಲ್ಲಿರುವ ಅವರ ಮನೆಯ ಮೊದಲನೇ ಮಹಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಎಫ್ಐಆರ್ ಪ್ರಕಾರ, ಅವರು ಬಿಎಲ್ಒ ಕರ್ತವ್ಯಕ್ಕೆ ಸಂಬಂಧಿಸಿ ಕೆಲವು ಸಮಯದಿಂದ ಒತ್ತಡದಲ್ಲಿದ್ದರು ಎಂದು ಹೇಳಲಾಗಿದೆ.
ಎಸ್ಐಆರ್ನ ಕರ್ತವ್ಯಕ್ಕೆ ಸಂಬಂಧಿಸಿ ತನ್ನ ಪುತ್ರ ಕಳೆದ ಕೆಲವು ದಿನಗಳಿಂದ ಒತ್ತಡ ಎದುರಿಸುತ್ತಿದ್ದ ಎಂದು ಜಾರ್ಜ್ ಅವರ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.







