Kerala | ಕಸ್ಟಡಿ ಆದೇಶದ ಬಳಿಕ ಮಕ್ಕಳನ್ನು ಕೊಂದು ತಂದೆ, ಅಜ್ಜಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಕಣ್ಣೂರು,ಡಿ.23: ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಕೇರಳದ ಕಣ್ಣೂರಿನಲ್ಲಿಯ ಅವರ ಮನೆಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿವೆ. ಕೌಟುಂಬಿಕ ನ್ಯಾಯಾಲಯದಲ್ಲಿಯ ವಿವಾದಕ್ಕೆ ಸಂಬಂಧಿಸಿದಂತೆ ಈ ಸಾವುಗಳು ಸಂಭವಿಸಿವೆ.
ಮೃತರನ್ನು ಕಲಾಧರನ್ ಕೆ.ಟಿ.(36), ಅವರ ತಾಯಿ ಉಷಾ ಕೆ.ಟಿ.(56), ಮಕ್ಕಳಾದ ಹಿಮಾ (6) ಮತ್ತು ಕಣ್ಣನ್ (2) ಎಂದು ಗುರುತಿಸಲಾಗಿದೆ.
ಕಲಾಧರನ್ ಮತ್ತು ಉಷಾ ಮಕ್ಕಳಿಗೆ ಕೀಟನಾಶಕ ಬೆರೆಸಿದ ಹಾಲನ್ನು ಕುಡಿಸಿ, ಬಳಿಕ ತಾವೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಪೋಲಿಸರ ಪ್ರಕಾರ ಕಲಾಧರನ್ ಮತ್ತು ಅವರ ಪತ್ನಿ ನಯನತಾರಾ ಪ್ರತ್ಯೇಕವಾಗಿ ವಾಸವಾಗಿದ್ದು, ವಿವಾದವು ಕೌಟುಂಬಿಕ ನ್ಯಾಯಾಲಯದಲ್ಲಿದೆ. ಮಕ್ಕಳನ್ನು ತಾಯಿಯ ವಶಕ್ಕೆ ನೀಡುವಂತೆ ನ್ಯಾಯಾಲಯವು ಇತ್ತೀಚಿಗೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ನಯನತಾರಾ ಮಕ್ಕಳನ್ನು ತಕ್ಷಣ ತನಗೆ ಹಸ್ತಾಂತರಿಸುವಂತೆ ಕೋರಿ ಪೋಲಿಸರನ್ನು ಸಂಪರ್ಕಿಸಿದ್ದರು.
ಪಯ್ಯಾನೂರಿನಲ್ಲಿ ರಿಕ್ಷಾ ಚಾಲಕರಾಗಿರುವ ಉಷಾರ ಪತಿ ಎ.ಕೆ.ಉಣ್ಣಿಕೃಷ್ಣನ್ ಅವರು ಸೋಮವಾರ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ಮನೆಗೆ ಮರಳಿದಾಗ ಮನೆಯ ಬಾಗಿಲುಗಳನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು. ಸಿಟ್-ಔಟ್ ನಲ್ಲಿ ಆತ್ಮಹತ್ಯೆ ಚೀಟಿಯೊಂದು ಪತ್ತೆಯಾಗಿದ್ದು, ಪದೇ ಪದೇ ಕರೆದರೂ ಬಾಗಿಲು ತೆರೆಯದಿದ್ದಾಗ ಉಣ್ಣಿಕೃಷ್ಣನ್ ಪೋಲಿಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಪೋಲಿಸರು ಬಲಪ್ರಯೋಗದಿಂದ ಬಾಗಿಲು ತೆರೆದು ನೋಡಿದಾಗ ಉಷಾ ಮತ್ತು ಕಲಾಧರನ್ ಬೆಡ್ರೂಮ್ ನಲ್ಲಿ ನೇಣು ಬಿಗಿದುಕೊಂಡಿದ್ದರು ಮತ್ತು ಮಕ್ಕಳ ಮೃತದೇಹಗಳು ನೆಲದಲ್ಲಿ ಬಿದ್ದುಕೊಂಡಿದ್ದವು.
ರವಿವಾರ ರಾತ್ರಿ ತಾವು ಕಲಾಧರನ್ಗೆ ಕರೆಯನ್ನು ಮಾಡಿ ನ್ಯಾಯಾಲಯದ ಆದೇಶದಂತೆ ಮಕ್ಕಳನ್ನು ಸೋಮವಾರದೊಳಗೆ ಹಸ್ತಾಂತರಿಸುವಂತೆ ಸೂಚಿಸಿದ್ದನ್ನು ಪೋಲಿಸರು ದೃಢಪಡಿಸಿದ್ದಾರೆ.







