ಕೇರಳ ಕರಡು ಮತದಾರರ ಪಟ್ಟಿ ಪ್ರಕಟ: 24.08 ಲಕ್ಷ ಮತದಾರರಿಗೆ ಕೊಕ್!

Photo Credit : PTI
ತಿರುವನಂತಪುರಂ: ಕೇರಳದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಮುಕ್ತಾಯಗೊಂಡ ಬಳಿಕ, ಮಂಗಳವಾರ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, 24,08,503 ಮತದಾರರನ್ನು ವಿವಿಧ ಕಾರಣಗಳಿಗೆ ಕೈಬಿಡಲಾಗಿದೆ. ಆದರೆ, 2022ರ ಮತಪಟ್ಟಿಯಲ್ಲಿರುವ 19 ಲಕ್ಷ ಮತದಾರರನ್ನು ಗುರುತಿಸುವ ಕೆಲಸ ಇನ್ನೂ ಬಾಕಿ ಇದೆ.
ಕರಡು ಮತದಾರರ ಪಟ್ಟಿ ಪ್ರಕಟಗೊಂಡ ನಂತರ, ಕೇರಳ ಮತದಾರರ ಒಟ್ಟು ಸಂಖ್ಯೆ 2,78,50,855ರಿಂದ 2,54,42,352ಕ್ಕೆ ಇಳಿಕೆಯಾಗಿದೆ. ಈ ಮತಪಟ್ಟಿಯು 1,23,83,341 ಪುರುಷ ಮತದಾರರು ಹಾಗೂ 1,30,58,731 ಮಹಿಳಾ ಮತದಾರರು ಹಾಗೂ 280 ಲಿಂಗಾಂತರಿ ಮತದಾರರಿದ್ದಾರೆ.
ಮತಪಟ್ಟಿಯಿಂದ ಕೈಬಿಡಲಾಗಿರುವ 24,08,503 ಮತದಾರರ ಪೈಕಿ, ಸುಮಾರು 1,60,830 ಮತದಾರರು ತಮ್ಮ ಭರ್ತಿ ಮಾಡಿದ ಅರ್ಜಿಗಳನ್ನು ಮರಳಿಸಿಲ್ಲ ಅಥವಾ ಅರ್ಜಿಗಳನ್ನು ಸ್ವೀಕರಿಸಲು ಒಪ್ಪಿಗೆ ನೀಡಿಲ್ಲ. ಉಳಿದ 6,45,548 ಮತದಾರರ ಗುರುತನ್ನು ಪತ್ತೆ ಹಚ್ಚಬೇಕಿದೆ.
ಕೈಬಿಟ್ಟಿರುವ ಇನ್ನುಳಿದ ಮತದಾರರ ಪೈಕಿ 6,49,885 ಮತದಾರರು ಮೃತಪಟ್ಟಿದ್ದರೆ, 8,16,221 ಮತದಾರರು ಸ್ಥಳಾಂತರಗೊಂಡಿದ್ದಾರೆ. ಉಳಿದ 1,36,029 ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಗೊಂಡಿದೆ. ಈ ಹಿಂದಿನ ಮತಪಟ್ಟಿಗೆ ಹೋಲಿಸಿದರೆ, ಕರಡು ಮತಪಟ್ಟಿಯಲ್ಲಿ ಒಟ್ಟು ಶೇ. 8.65 ಮತದಾರರನ್ನು ಕೈಬಿಡಲಾಗಿದೆ.







