Kerala | ಸಾಯ್ ಹಾಸ್ಟೆಲ್ ನಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Photo Credit : indiatoday.in
ಕೊಲ್ಲಂ, ಜ.15: ಇಲ್ಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್ ನಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರನ್ನು ಕೋಝಿಕೋಡ್ನ ಸಾಂಡ್ರಾ (17) ಮತ್ತು ತಿರುವನಂತಪುರ ನಿವಾಸಿ ವೈಷ್ಣವಿ (15) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ಈ ದುರಂತ ಬೆಳಕಿಗೆ ಬಂದಿದೆ. ಬಾಲಕಿಯರು ತರಬೇತಿಗೆ ಹಾಜರಾಗಿರಲಿಲ್ಲ. ಹೀಗಾಗಿ ಪರಿಶೀಲಿಸಲು ಅಧಿಕಾರಿಗಳು ಅವರ ಕೊಠಡಿಗೆ ತೆರಳಿದ್ದರು. ಪದೇಪದೇ ಕರೆದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಸಿಬ್ಬಂದಿಗಳು ಬಲಪ್ರಯೋಗದಿಂದ ಬಾಗಿಲು ತೆರೆದು ಒಳಪ್ರವೇಶಿಸಿ ನೋಡಿದಾಗ, ಬಾಲಕಿಯರ ಮೃತದೇಹಗಳು ಸೀಲಿಂಗ್ ಫ್ಯಾನ್ ಗಳಿಂದ ನೇತಾಡುತ್ತಿದ್ದವು.
ಜೊತೆಯಲ್ಲಿ ತರಬೇತಿ ಪಡೆಯುತ್ತಿದ್ದ ಇತರ ವಿದ್ಯಾರ್ಥಿನಿಯರು, ಇಬ್ಬರೂ ಬಾಲಕಿಯರು ತಡರಾತ್ರಿ ಒಟ್ಟಿಗಿದ್ದನ್ನು ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾವುಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಚೀಟಿ ಪತ್ತೆಯಾಗಿಲ್ಲ. ಸಾವುಗಳಿಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
12ನೇ ತರಗತಿಯಲ್ಲಿ ಓದುತ್ತಿದ್ದ ಸಾಂಡ್ರಾ ಅಥ್ಲೆಟಿಕ್ಸ್ ನಲ್ಲಿ ತರಬೇತಿ ಪಡೆಯುತ್ತಿದ್ದರೆ, ಕಬಡ್ಡಿ ಆಟಗಾರ್ತಿ ವೈಷ್ಣವಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಸಾಮಾನ್ಯವಾಗಿ ಬೇರೆ ಕೊಠಡಿಯಲ್ಲಿ ಉಳಿಯುತ್ತಿದ್ದ ವೈಷ್ಣವಿ, ಬುಧವಾರ ರಾತ್ರಿ ಸಾಂಡ್ರಾಳ ಕೊಠಡಿಯಲ್ಲಿ ತಂಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಳ ಬಳಿಕ ಪೊಲೀಸರು ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.







