Kerala | ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ | ಸಂಚುಕೋರನಿಗೆ ಇನ್ನೂ ಶಿಕ್ಷೆಯಾಗಿಲ್ಲ, ನ್ಯಾಯ ಇನ್ನೂ ಅಪೂರ್ಣ: ನಟಿ Manju Warrier

photo: ndtv
ಕೊಚ್ಚಿ: 2017ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಸಂತ್ರಸ್ತೆಗೆ ಇನ್ನೂ ಸಂಪೂರ್ಣ ನ್ಯಾಯ ದೊರೆತಿಲ್ಲ ಎಂದು ಮಲಯಾಳಂ ನಟಿ ಮಂಜು ವಾರಿಯರ್ ಹೇಳಿದ್ದಾರೆ.
ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ರವಿವಾರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಅಪರಾಧವನ್ನು ಯೋಜಿಸಿ ಕಾರ್ಯಗತಗೊಳಿಸಿದ ಮನಸ್ಸು ಇನ್ನೂ ಮುಕ್ತವಾಗಿ ತಿರುಗಾಡುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೂ ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಇನ್ನೂ ಅಪೂರ್ಣವಾಗಿದೆ. ಅಪರಾಧ ಎಸಗಿದವರಿಗೆ ಮಾತ್ರ ಶಿಕ್ಷೆಯಾಗಿದೆ,” ಎಂದು ಮಂಜು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಪರಾಧದ ಹಿಂದಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿದಾಗ ಮಾತ್ರ ನ್ಯಾಯ ಪೂರ್ಣಗೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಇದು ಕೇವಲ ಒಬ್ಬ ಸಂತ್ರಸ್ತೆಯ ಪ್ರಶ್ನೆಯಲ್ಲ. ಪ್ರತಿಯೊಬ್ಬ ಹುಡುಗಿ, ಪ್ರತಿಯೊಬ್ಬ ಮಹಿಳೆ ಹಾಗೂ ಪ್ರತಿಯೊಬ್ಬ ಮನುಷ್ಯರು ಭಯವಿಲ್ಲದೆ ಕೆಲಸದ ಸ್ಥಳಗಳಲ್ಲಿ, ಬೀದಿಗಳಲ್ಲಿ ಹಾಗೂ ತಮ್ಮ ಜೀವನದಲ್ಲಿ ತಲೆಯೆತ್ತಿ ನಡೆಯುವ ಹಕ್ಕಿನ ವಿಷಯವಾಗಿದೆ ಎಂದು ಮಂಜು ವಾರಿಯರ್ ಅಭಿಪ್ರಾಯಪಟ್ಟಿದ್ದಾರೆ.
ಅಪರಾಧ ನಡೆದ ಸುಮಾರು ಎಂಟು ವರ್ಷ ಒಂಬತ್ತು ತಿಂಗಳ ಬಳಿಕ, ಡಿಸೆಂಬರ್ 8ರಂದು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಆರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಪ್ರಕರಣದ ಮಾಸ್ಟರ್ಮೈಂಡ್ ಎಂದು ಆರೋಪಿಸಲಾಗಿದ್ದ ನಟ ದಿಲೀಪ್ ಅವರನ್ನು ಮಾತ್ರ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಸುಮಾರು 1,500 ಪುಟಗಳ ತೀರ್ಪಿನಲ್ಲಿ, ಅಪರಾಧದ ಹಿಂದಿನ ಪಿತೂರಿಯಲ್ಲಿ ದಿಲೀಪ್ ಅವರ ಪಾತ್ರ ಸಾಬೀತಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪಿತೂರಿಯಲ್ಲಿ ಮೊದಲ ಹಾಗೂ ಎರಡನೇ ಆರೋಪಿಗಳಾದ ಪಲ್ಸರ್ ಸುನಿ ಮತ್ತು ಮಾರ್ಟಿನ್ ಆಂಟನಿ ಮಾತ್ರ ಭಾಗಿಯಾಗಿದ್ದರು ಎಂದು ನ್ಯಾಯಾಲಯ ಹೇಳಿದೆ.







