ಕೇರಳ: ಬಸ್ ಸಿಬ್ಬಂದಿಯಿಂದ ಹಲ್ಲೆ; ಆಟೋ ಚಾಲಕ ಮೃತ್ಯು

PC: x.com/Onmanorama
ಮಲಪ್ಪುರಂ: ಬಸ್ ಸಿಬ್ಬಂದಿಯ ಜತೆ ನಡೆದ ಸಂಘರ್ಷದ ವೇಳೆ ಹಲ್ಲೆಗೊಳಗಾದ ಆಟೊ ರಿಕ್ಷಾ ಚಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಕೋಟ್ಟಕ್ಕಲ್ ಸಮೀಪದ ಒದುಕ್ಕುಂಗಲ್ ಎಂಬಲ್ಲಿ ನಡೆದಿರವ ಬಗ್ಗೆ ವರದಿಯಾಗಿದೆ.
ಮೃತ ಚಾಲಕನನ್ನು ಕೋಟ್ಟಕ್ಕಲ್ ಸಮೀಪದ ಮನೂರ್ ನಿವಾಸಿ ಅಬ್ದುಲ್ ಲತೀಫ್ (49) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಟಾಪ್ಸಿ ಪರೀಕ್ಷೆ ಬಳಿಕ ಸಾವಿನ ಕಾರಣ ದೃಢವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ವಡಕ್ಕೆಮಣ್ಣಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನನ್ನು ಹತ್ತಿಸಿಕೊಂಡ ಹಿನ್ನೆಲೆಯಲ್ಲಿ ಲತೀಫ್ ಮೇಲೆ ಬಸ್ ಚಾಲಕ, ಆಟೊ ಚಾಲಕನನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ ಎನ್ನಲಾಗಿದೆ. ಮನೋರಮಾ ನ್ಯೂಸ್ ನಲ್ಲಿ ಪ್ರಸಾರವಾದ ದೃಶ್ಯ ತುಣುಕಿನಲ್ಲಿ, ಬಸ್ ಚಾಲಕ ಲತೀಫ್ ಮೇಲೆ ಹಲ್ಲೆ ನಡೆಸುತ್ತಿರುವುದು ಕಾಣಿಸುತ್ತಿದೆ.
ಗಾಯಗೊಂಡ ಲತೀಫ್ ನನ್ನು ಮಲಪ್ಪುರಂ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಕುಸಿದು ಬಿದ್ದು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮೂವರು ಮಂದಿ ಬಸ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಘರ್ಷದಲ್ಲಿ ಒಳಗೊಂಡ ಬಸ್ ಸಿಬ್ಬಂದಿ ಮಂಜೇರಿ-ತಿರೂರು ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಬಸ್ ಸಿಬ್ಬಂದಿಯ ವಿಚಾರಣೆ ನಡೆಸಿ, ಸ್ಥಳೀಯರಿಂದ ಸಾಕ್ಷ್ಯಗಳನ್ನು ಪಡೆದಿದ್ದಾರೆ. ಲತೀಫ್ ಮೃತದೇಹ ಮಲಪ್ಪುರಂ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಯ್ಯಲಾಗುತ್ತದೆ ಎಂದು ಮೂಲಗಳು ಹೇಳಿವೆ.
മലപ്പുറത്ത് ഓട്ടോ ഡ്രൈവർ അബ്ദുൾ ലത്തീഫിനെ ബസ് ജീവനക്കാർ മർദ്ദിക്കുന്ന ദൃശ്യങ്ങൾ.... #malappuram #kodur #zeemalayalamnews pic.twitter.com/UJJU2forN4
— Zee Malayalam News (@ZeeMalayalam) March 7, 2025







