"ಕ್ರಿಸ್ಮಸ್ ಸಂಭ್ರಮದ ಮೇಲೆ ದಾಳಿಗಳು ಆತಂಕಕಾರಿ": ಕೋಮು ಅಸಹಿಷ್ಣುತೆ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಎಚ್ಚರಿಕೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Photo credit: X/ANI)
ತಿರುವನಂತಪುರಂ: ದೇಶದ ವಿವಿಧ ಭಾಗಗಳಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯ ಮೇಲೆ ಹೆಚ್ಚುತ್ತಿರುವ ದಾಳಿಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂತಹ ಘಟನೆಗಳು ಕ್ರಿಸ್ಮಸ್ ಹಬ್ಬದೊಂದಿಗೆ ಬೆಸೆದುಕೊಂಡಿರುವ ಶಾಂತಿಯ ಸಾರ್ವತ್ರಿಕ ಸಂದೇಶವನ್ನು ಹಾಳು ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಘಟನೆಗಳು ತೀವ್ರ ಕಳವಳಕಾರಿಯಾಗಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರ್ಯಾಣ, ಒಡಿಶಾ, ಛತ್ತೀಸ್ಗಢ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಾದ್ಯಂತ ಇಂತಹ ದಾಳಿಗಳು ನಡೆಯುತ್ತಿವೆ ಎಂಬ ವರದಿಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಸರಕಾರ ಕ್ರಿಸ್ಮಸ್ ರಜೆ ಹಾಗೂ ಸಂಭ್ರಮಾಚರಣೆಯನ್ನು ರದ್ದುಗೊಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಿದ್ದು, ಅದೇ ದಿನ ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಜನ್ಮ ದಿನಾಚರಣೆಯನ್ನು ಆಚರಿಸುವಂತೆ ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುವಂತೆ ಸೂಚಿಸಿದೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
ಕೇರಳ ಇಂತಹ ಬೆಳವಣಿಗೆಗಳಿಂದ ಮುಕ್ತವಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆಯಾದರೂ, ಅಂತಹ ನಂಬಿಕೆಗಳನ್ನು ಹೂತು ಹಾಕುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.







