'ದಿ ಕೇರಳ ಸ್ಟೋರಿ' ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಸಮಾಧಾನ ವ್ಯಕ್ತಪಡಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
"ಕೋಮು ದ್ವೇಷ ಹರಡಲು ಚಲನಚಿತ್ರಗಳನ್ನು ಬಳಸಿಕೊಳ್ಳಲು ಅನುಮೋದನೆ ನೀಡಿದಂತಾಗಿದೆ"

ಪಿಣರಾಯಿ ವಿಜಯನ್ | PTI
ತಿರುವನಂತಪುರಂ: ‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗೌರವ ನೀಡುವ ಮೂಲಕ, ಕೋಮು ದ್ವೇಷವನ್ನು ಹರಡಲು ಚಲನಚಿತ್ರಗಳನ್ನು ಬಳಸಿಕೊಳ್ಳಲು ಅನುಮೋದನೆ ನೀಡಿದಂತಾಗಿದೆ ಎಂದು ಶನಿವಾರ ಅಸಮಾಧಾನ ವ್ಯಕ್ತಪಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂತಹ ನಡೆಗಳನ್ನು ಸಾಂಸ್ಕೃತಿಕ ವಲಯ ಹಾಗೂ ಚಲನಚಿತ್ರೋದ್ಯಮಗಳು ಒಗ್ಗಟ್ಟಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.
ಕೇರಳ ಚಲನಚಿತ್ರ ನೀತಿ ಸಮ್ಮೇಳವನ್ನು ಉದ್ಘಾಟಿಸುವುದಕ್ಕೂ ಮುನ್ನ ಮಾತನಾಡಿದ ಅವರು, “ಕೇರಳದ ಜಾತ್ಯತೀತ ಪರಂಪರೆಯನ್ನು ಅವಮಾನಿಸಿದ, ಜಗತ್ತಿನೆದುರು ಅದಕ್ಕೆ ಮಸಿ ಬಳಿದ ‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನೀಡುವುದರೊಂದಿಗೆ ಗೌರವಿಸಿರುವುದು ದುರದೃಷ್ಟಕರವಾಗಿದೆ” ಎಂದು ವಿಷಾದಿಸಿದರು.
“ಇದು ಭಾರತೀಯ ಚಲನಚಿತ್ರ ಪರಂಪರೆಗೂ ಅವಮಾನವಾಗಿದ್ದು, ನಮ್ಮ ದೇಶದಲ್ಲಿನ ಜಾತ್ಯತೀತತೆಯನ್ನು ನಾಶಗೊಳಿಸಿ, ಅದರ ಬದಲು ಕೋಮುವಾದವವನ್ನು ಸ್ಥಾಪಿಸಬಹುದು ಎಂಬ ಸಂದೇಶವನ್ನು ಈ ನಡೆ ರವಾನಿಸಿದೆ” ಎಂದೂ ಅವರು ಆತಂಕ ವ್ಯಕ್ತಪಡಿಸಿದರು.
ಚಲನಚಿತ್ರೋದ್ಯಮವು ಕೇರಳದ ಇಂತಹ ವಿರೂಪಗೊಳಿಸಿದ ಚಿತ್ರಣದ ವಿರುದ್ಧ ಮೇಲೆದ್ದು ವಿರೋಧಿಸಬೇಕು ಹಾಗೂ ಇಂತಹ ನಡೆಗಳಿಗೆ ಅಂತ್ಯ ಹಾಡಬೇಕು ಎಂದು ಅವರು ಕರೆ ನೀಡಿದರು.
‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕಾಗಿ ನಿರ್ದೇಶಕ ಸುದೀಪ್ತೊ ಸೇನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನವಾಗಿದ್ದು, ಈ ಚಿತ್ರವು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನೂ ಬಾಚಿಕೊಂಡಿದೆ.







