ಕೇರಳ: ಬಾಲಕಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ದಂಪತಿ, ಮತ್ತು ಪುತ್ರಿಯ ಬಂಧನ
ಪದ್ಮಕುಮಾರ್, ಅನಿತಾ ಕುಮಾರಿ | Photocradit ; thenewsminute.com
ಕೊಲ್ಲಂ (ಕೇರಳ): ಆರು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ರೂ. 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಉದ್ಯಮಿ, ಆತನ ಪತ್ನಿ ಹಾಗೂ ಯೂಟ್ಯೂಬರ್ ಆಗಿರುವ ಅವರ ಪುತ್ರಿಯನ್ನು ಕೇರಳ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಳೆದ ವಾರ ನಡೆದಿದ್ದ ಅಪಹರಣ ಘಟನೆಯು ಕೇರಳದಾದ್ಯಂತ ಆಂತಕಕ್ಕೆ ಕಾರಣವಾಗಿತ್ತು, ನಂತರ ಅಪಹರಣಕ್ಕೀಡಾಗಿದ್ದ ಬಾಲಕಿಯು ಕೊಲ್ಲಂನ ಸಾರ್ವಜನಿಕ ಮೈದಾನವೊಂದರಲ್ಲಿ ಪತ್ತೆಯಾಗಿದ್ದಳು.
ವೈಜ್ಞಾನಿಕ, ಡಿಜಿಟಲ್ ಸಾಕ್ಷ್ಯಗಳನ್ನು ಆಧರಿಸಿ, ಆರೋಪಿಗಳಾದ ಎಂಜಿನಿಯರಿಂಗ್ ಪದವೀಧರ ಪದ್ಮಕುಮಾರ್, ಆತನ ಪತ್ನಿ ಅನಿತಾ ಕುಮಾರಿ ಹಾಗೂ ಯೂಟ್ಯೂಬ್ ನಲ್ಲಿ ಗಮನಾರ್ಹ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ಆತನ ಪುತ್ರಿ ಅನುಪಮ ಪದ್ಮನ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯೊಬ್ಬನ ಧ್ವನಿಯನ್ನು ಸಾರ್ವಜನಿಕರು ಗುರುತಿಸಿ, ಮಾಹಿತಿ ನೀಡಿದ್ದು ಆರೋಪಿಗಳ ಬಂಧನದಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಜಿತ್ ಕುಮಾರ್ ಹೇಳಿದ್ದಾರೆ.
ಅಪಹರಣಕ್ಕೊಳಗಾಗಿದ್ದ ಬಾಲಕಿಯು ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ಪದ್ಮಕುಮಾರ್ ಅವರ ರೇಖಾಚಿತ್ರವನ್ನು ಬಿಡಿಸುವಲ್ಲಿ ಯಶಸ್ವಿಯಾದ ನಂತರ, ಆರೋಪಿಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಯಿತು.
ಈ ಅಪಹರಣ ಕೃತ್ಯಕ್ಕೆ ಆರೋಪಿಗಳು ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟ ಕಾರಣವೆಂದು ಹೇಳಲಾಗಿದ್ದು, ಇದರ ಹಿಂದಿನ ಸೂತ್ರಧಾರಿ ಅನಿತಾ ಕುಮಾರಿ ಎಂದು ಪೊಲೀಸರು ಶಂಕಿಸಿದ್ದಾರೆ.
ಅಪಹರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿನಂದಿಸಿದ್ದಾರೆ.