ಕೇರಳ 'ಕಡು ಬಡತನ ಮುಕ್ತ' ರಾಜ್ಯ : ಅಧಿಕೃತವಾಗಿ ಘೋಷಿಸಿದ ಸಿಎಂ ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್ | PC : PTI
ತಿರುವನಂತಪುರಂ: ಕೇರಳ 'ಕಡು ಬಡತನ ಮುಕ್ತ' ರಾಜ್ಯ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದರು. ಎಲ್ಡಿಎಫ್ ಸರಕಾರದ ಪ್ರಕಾರ, ಇಂತಹ ಸಾಧನೆ ಮಾಡಿರುವುದರಲ್ಲಿ ಭಾರತದಲ್ಲೇ ಕೇರಳ ಮೊದಲ ರಾಜ್ಯವಾಗಿದೆ.
ರಾಜ್ಯ ಸರಕಾರ 2021ರಲ್ಲಿ ಬಡತನ ಮುಕ್ತ ರಾಜ್ಯವನ್ನಾಗಿಸಲು ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಯಡಿ 64,006 ಕುಟುಂಬಗಳನ್ನು “ಅತೀ ಬಡವರು” ಎಂದು ಗುರುತಿಸಲಾಗಿತ್ತು. ಈ ಕುಟುಂಬಗಳಿಗೆ ನಾಲ್ಕು ವರ್ಷಗಳ ಕಾಲ ವಿಶೇಷ ಸಹಾಯ ನೀಡುವ ಮೂಲಕ ಕಡು ಬಡತನ ನಿವಾರಣೆಯ ಗುರಿ ಸಾಧಿಸಿದೆ ಎಂದು ವರದಿಯಾಗಿದೆ.
ಕೇರಳ ರಾಜ್ಯ ಸ್ಥಾಪನೆ ದಿನವಾದ ನವೆಂಬರ್ 1ರಂದು ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘೋಷಣೆ ಮಾಡಿದರು.
ಸಚಿವ ಎಂ.ಬಿ.ರಾಜೇಶ್ ಅವರ ಪ್ರಕಾರ, ನೀತಿ ಆಯೋಗದ ಅಧ್ಯಯನ ಕೇರಳ ಭಾರತದಲ್ಲಿ ಅತ್ಯಂತ ಕಡಿಮೆ ಅಂದರೆ 0.7% ಬಡತನದ ಪ್ರಮಾಣವನ್ನು ಹೊಂದಿದೆ ಎಂದು ತಿಳಿಸಿತ್ತು. ಆ ಬಳಿಕ ಕಡು ಬಡತನ ಮುಕ್ತ ರಾಜ್ಯವನ್ನಾಗಿಸುವ ಯೋಜನೆಯನ್ನು ರೂಪಿಸಲಾಗಿತ್ತು.





