ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಕೇರಳ ಸರಕಾರ ಅರ್ಜಿ

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ನ. 18: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ಣಗೊಳ್ಳುವ ವರೆಗೆ ರಾಜ್ಯದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ ಮುಂದೂಡುವಂತೆ ಕೋರಿ ಕೇರಳ ಸರಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿಸೆಂಬರ್ 9 ಹಾಗೂ ಡಿಸೆಂಬರ್ 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 13ರಂದು ಮತ ಎಣಿಕೆ ನಡೆಯಲಿದೆ. ಡಿಸೆಂಬರ್ 18ರಂದು ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ.
ಚುನಾವಣಾ ಆಯೋಗ ನವೆಂಬರ್ 4ರಂದು ಕೇರಳ ಸೇರಿದಂತೆ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭಿಸಿದೆ.
ಕೇರಳ ಉಚ್ಚ ನ್ಯಾಯಾಲಯ ನವೆಂಬರ್ 14ರಂದು ಈ ಪ್ರಕ್ರಿಯಯನ್ನು ಮುಂದೂಡಲು ನಿರಾಕರಿಸಿತ್ತು. ಅಲ್ಲದೆ, ಎಲ್ಡಿಎಫ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿತ್ತು.
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವುದು ಆಡಳಿತಾತ್ಮಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಹಾಗೂ ಚುನಾವಣೆಗಳಿಗೆ ಅಡ್ಡಿ ಉಂಟಾಗುತ್ತದೆ ಎಂದು ಕೇರಳ ಸರಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.
ರಾಜ್ಯ ಸರಕಾರದ ಅರ್ಜಿಯ ಪ್ರಕಾರ, ಚುನಾವಣೆಗಳಿಗೆ 68,000 ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಅಲ್ಲದೆ, 1.7 ಲಕ್ಷ ಸರಕಾರಿ ಸಿಬ್ಬಂದಿಯ ಅಗತ್ಯವಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಹೆಚ್ಚುವರಿಯಾಗಿ 25,668 ಸಿಬ್ಬಂದಿ ಬೇಕಾಗುತ್ತದೆ.
ಇದು ರಾಜ್ಯದ ಆಡಳಿತದ ಮೇಲೆ ಭಾರೀ ಒತ್ತಡ ಉಂಟು ಮಾಡುತ್ತದೆ ಹಾಗೂ ದಿನನಿತ್ಯದ ಆಡಳಿತದ ಕೆಲಸಗಳನ್ನು ಸ್ಥಗಿತಗೊಳಿಸುತ್ತದೆ ಎಂದು ಸರಕಾರ ಪ್ರತಿಪಾದಿಸಿದೆ.







