ವಿಶ್ವಸಂಸ್ಥೆಯಲ್ಲಿ ಮಲಯಾಳಂನಲ್ಲಿ 'ಅಮ್ಮ'ನ ಭಾಷಣಕ್ಕೆ 25 ವರ್ಷ | ಕೇರಳ ಸರ್ಕಾರದಿಂದ ಗೌರವ

PC | indianexpress
ಕೊಲ್ಲಂ: ವಿಶ್ವಸಂಸ್ಥೆಯ ಮಹಾಧಿವೇಶನ ಹಾಲ್ನಲ್ಲಿ ಮಾತಾ ಅಮೃತಾನಂದಮಯಿ ಮಲೆಯಾಳಂ ಭಾಷೆಯಲ್ಲಿ ಭಾಷಣ ಮಾಡಿದ 25ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೇರಳ ಸರ್ಕಾರ ಮಾತಾ ಅಮೃತಾನಂದಮಯಿ ಅವರನ್ನು ಗೌರವಿಸಿತು.
ಅಮೃತಾಶ್ರಮ-72 ಸರಣಿ ಕಾರ್ಯಕ್ರಮದ ಅಂಗವಾಗಿ ಅಮೃತ ವಿಶ್ವ ವಿದ್ಯಾಪೀಠ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಸನ್ಮಾನ ನೆರವೇರಿಸಿದರು.
"ಮಲೆಯಾಳಂ ಭಾಷೆ ಹಾಗೂ ಸಂಸ್ಕೃತಿಯನ್ನು ಅಮ್ಮ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ತಮ್ಮ ಮಾತೃಭಾಷೆಯನ್ನು ಮರೆತವರಿಗೆ ಇದು ಜಾಗತಿಕ ವೇದಿಕೆಯಲ್ಲಿ ಪ್ರಬಲ ಸಂದೇಶವೂ ಆಗಿದೆ. ಇದು ಕೇವಲ ಸನ್ಮಾನ ಮಾತ್ರವಾಗಿರದೇ, ಇದು ಸಾಂಸ್ಕೃತಿಕ ಜಾಗೃತಿ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಕೂಡಾ ತಮ್ಮ ಗೌರವ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ" ಎಂದು ಸಾಜಿ ನುಡಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಮಲೆಯಾಳದ ಘೋಷವನ್ನು ಮತ್ತೊಮ್ಮೆ ಮೊಳಗಿದರು. ಕೇರಳದ ಧ್ವನಿ ಮೊಟ್ಟಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಮೊಳಗಿದ ಐತಿಹಾಸಿಕ ಕ್ಷಣವನ್ನು ಸ್ಮರಿಸಿಕೊಂಡರು.
ಈ ಗೌರವವನ್ನು ಮಲೆಯಾಳಂ ಭಾಷೆಗೆ ಅಮ್ಮ ಸಮರ್ಪಿಸಿದರು. "ಈ ಪ್ರಶಸ್ತಿ ಮಲೆಯಾಳಂಗೆ ಸಂದಿದೆ. ಇದು ನಮಗೆ ಐಎಂಟಿಟಿ ಮತ್ತು ವಿಧಾನವನ್ನು ನೀಡಿದೆ. ಮಾತೃಭಾಷೆಯನ್ನು ಸಂರಕ್ಷಿಸುವ ಹೆಮ್ಮೆಯ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಸ್ಫೂರ್ತಿ ನೀಡಬೇಕು" ಎಂದು ಅಮೃತಾನಂದಮಯಿ ಕರೆ ನೀಡಿದರು.







