ಕೇರಳದಲ್ಲಿ ಎಸ್ಐಆರ್ ಮುಂದೂಡಿಕೆ ಕೋರುವ ಅರ್ಜಿಗಳ ವಿಚಾರಣೆ ನ.21ಕ್ಕೆ ನಿಗದಿ

Photo : PTI
ಹೊಸದಿಲ್ಲಿ,ನ.19: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳು ಸದ್ಯದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಮುಂದೂಡುವಂತೆ ಕೇರಳ ಸರಕಾರ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಂಗ್ (ಐಯುಎಂಎಲ್) ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ನಡೆಸಲಿದೆ.
ಮತದಾರಪಟ್ಟಿಯ ತೀವ್ರ ಪರಿಷ್ಕರಣೆಯು ದುಸ್ತರವಾದ ಪ್ರಕ್ರಿಯೆಯಾಗಿದ್ದು, ಅದನ್ನು ಡಿಸೆಂಬರ್ 11ರಂದು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳ ಹೊಂದಿಸಿಕೊಳ್ಳುವುದಕ್ಕೆ ಸಾಧ್ಯವಾಗದು. ಇದು ಆಡಳಿತಾತ್ಮಕ ಬಿಕ್ಕಟ್ಟಿಗೆ ಕಾರಣವಾಗುವುದಲ್ಲದೆ ಮಾನವಸಂಪನ್ಮೂಲಗಳ ಮೇಲೂ ಒತ್ತಡ ಬೀರುತ್ತದೆ. ಆದುದರಿಂದ ಎಸ್ಐಆರ್ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಕೋರಿ ಕೇರಳ ಸರಕಾರ ಹಾಗೂ ಐಯುಂಎಲ್ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದವು.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿದ್ದ ಪೀಠವು ಈ ಅರ್ಜಿಗಳ ತುರ್ತು ಆಲಿಕೆಯನ್ನು ನವೆಂಬರ್ 21ಕ್ಕೆ ನಡೆಸಲು ಪಟ್ಟಿ ಮಾಡಿತು.
ಕೇರಳ ಸರಕಾರದ ಪರವಾಗಿ ಸಿ.ಕೆ.ಶಸಿ ಹಾಗೂ ಐಯುಎಂಎಲ್ ಪಕ್ಷದ ಪರವಾಗಿ ನ್ಯಾಯವಾದಿ ಹಾರಿಸ್ ಬೀರಾನ್ ವಾದಿಸಿದ್ದರು.
ಕೇರಳದಲ್ಲಿ ಎಸ್ಐಆರ್ ಪ್ರಕ್ರಿಯೆಯು ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ ನಡೆಯಲಿದೆ.
ಈ ನಡುವೆ ಕೇರಳ ಸರಕಾರವು ಡಿಸೆಂಬರ್ 9 ಹಾಗೂ ಡಿಸೆಂಬರ್ 11ರಂದು ರಾಜ್ಯದಾದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ನಡೆಸಲಿದೆ.
ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ,ಕೊಟ್ಟಾಯಂ,ಇಡುಕ್ಕಿ ಹಾಗೂ ಎರ್ನಾಕುಳಂನಲ್ಲಿ ಡಿಸೆಂಬರ್ 9ರಂದು ಮತದಾನ ನಡೆಯಲಿದೆ. ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್,ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಡಿಸೆಂಬರ್ 11ರಂದು ಮತದಾನ ನಡೆಯಲಿದೆ.
ಎಸ್ಐಆರ್ ಒಂದು ಬೃಹತ್ ಪ್ರಕ್ರಿಯೆಯಾಗಿದೆ ಅದಕ್ಕೆ ಸರಕಾರ ಹಾಗೂ ಅರೆ ಸರಕಾರಿ ಸೇವೆಗಳ 1.76 ಲಕ್ಷ ಸಿಬ್ಬಂದಿಗಳನ್ನು ನಿಯೋಜಿಸುವ ಅಗತ್ಯವಿದೆ. ಇದಕರ ಜೊತೆಗೆ 68 ಸಾವಿರ ಪೊಲೀಸರು ಮತ್ತಿತರ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆಯ ಅಗತ್ಯವಿದೆ. ಇದರ ಜೊತೆಗೆ 25,668 ಹೆಚ್ಚುವರಿ ಸಿಬ್ಬಂದಿಯ ಸೇವೆಗಳನ್ನು ಕೂಡಾ ಪಡೆದುಕೊಳ್ಳಲಾಗುತ್ತಿದೆ. ಆದರೆ ಎಸ್ಐಆರ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಏಕಕಾಲದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸುವುದು ಸದ್ಯಕ್ಕೆ ಅಸಾಧ್ಯ. ಇದರಿಂದಾಗಿ ರಾಜ್ಯದಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ತಲೆದೋರಲಿ ಎಂದು ರಾಜ್ಯ ಸರಕಾರ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಎಸ್ಐಆರ್ ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳನ್ನು ಸುಗಮವಾಗಿ ನಡೆಸುವುಕ್ಕೆ ಅಡಚಣೆಯುಂಟಾಗುತ್ತದೆ ಎಂದು ಕೇರಳ ಸರಕಾರ ಅರ್ಜಿಯಲ್ಲಿ ತಿಳಿಸಿದೆ. ಕೇರಳದಲ್ಲಿ 941 ಗ್ರಾಮಪಂಚಾಯತ್ ಗಳು, 152 ಬ್ಲಾಕ್ ಪಂಚಾಯತ್ ಗಳು, 14 ಜಿಲ್ಲಾ ಪಂಚಾಯತ್ ಗಳು, 87 ನಗರಸಭೆಗಳು ಹಾಗೂ ಆರು ನಗರಪಾಲಿಕೆಗಳು ಸೇರಿದಂತೆ 1200 ಸ್ಥಳೀಯಾಡಳಿ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.







