ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಮಾರ್ಗಸೂಚಿಗಳನ್ನು ಮರು ವ್ಯಾಖ್ಯಾನಿಸಿದ ಕೇರಳ ಸರಕಾರ
Photo: thenewsminute.com
ತಿರುವನಂತಪುರಂ: ರಾಜ್ಯದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸುವ ಮಾರ್ಗಸೂಚಿಗಳನ್ನು ಕೇರಳ ಸರಕಾರ ಮರು ವ್ಯಾಖ್ಯಾನಿಸಿದೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ನೂತನ ಮಾರ್ಗಸೂಚಿಯ ಪ್ರಕಾರ, ಎಂಡೋಸಲ್ಫಾನ್ ಪೀಡಿತ ಸ್ಥಳಗಳಲ್ಲಿ ಜೀವಿಸುವ ವ್ಯಕ್ತಿಗಳು ಅಥವಾ 1980 ಜನವರಿಯಿಂದ ಅಕ್ಟೋಬರ್ 2011ರ ವರೆಗಿನ ಭ್ರೂಣವನ್ನು ‘ಎಂಡೊಸಲ್ಫಾನ್ ಸಂತ್ರಸ್ತರು’ ಎಂದು ವ್ಯಾಖ್ಯಾನಿಸಲಾಗಿದೆ. ಇದಕ್ಕೆ ಸಂಬಂಧಿಸಿ ಇಲಾಖೆ ಅಕ್ಟೋಬರ್ 18ರಂದು ಆದೇಶ ಜಾರಿಗೊಳಿಸಿದೆ.
ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ತಜ್ಞರ ಸಮಿತಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಬಳಿಕ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಸಮಿತಿಯನ್ನು 2023 ಸೆಪ್ಟೆಂಬರ್ ನಲ್ಲಿ ಸ್ಥಾಪಿಸಲಾಗಿತ್ತು. ಅದು ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಕರಡು ಮಾರ್ಗಸೂಚಿಗಳನ್ನು ಒಳಗೊಂಡ ವರದಿಯನ್ನು ನವೆಂಬರ್ ನಲ್ಲಿ ಸಲ್ಲಿಸಿತ್ತು ಎಂದು ಸರಕಾರದ ಆದೇಶ ಹೇಳಿದೆ.
ಎಂಡೋಸಲ್ಫಾನ್ ಪರಿಸರದಲ್ಲಿ ಉಳಿಯುವ ಅವಧಿ ವಿವಿಧ ಅಧ್ಯಯನಗಳಲ್ಲಿ ಭಿನ್ನವಾಗಿದೆ. ಎಂಡೋಸಲ್ಪಾನ್ ಪರಿಸರದಲ್ಲಿ ಉಳಿಯುವ ಗರಿಷ್ಠ ಕಾಲಾವಧಿ 5 ವರ್ಷ ಎಂದು ಹೇಳಿರುವುದರಿಂದ ತಜ್ಞರ ಸಮಿತಿ ಈ ತೀರ್ಮಾನಕ್ಕೆ ಬಂದಿದೆ. ಸಂತ್ರಸ್ತರು ವಿರೂಪತೆ ಹೊಂದಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದ ಬಳಿಕ 2005ರಲ್ಲಿ ಎಂಡೋಸಲ್ಫಾನ್ ಸಿಂಪಡಿಸುವುದಕ್ಕೆ ನಿಷೇಧ ಹೇರಲಾಗಿತ್ತು.
‘‘2005 ಅಕ್ಟೋಬರ್ 25ರ ಗಝೆಟ್ ಅಧಿಸೂಚನೆಯ ಮೂಲಕ ವಿಧಿಸಲಾದ ನಿಷೇಧವನ್ನು ಪರಿಗಣಿಸಿದರೆ, ಎಂಡೋಸಲ್ಫಾನ್ ಪರಿಸರದಲ್ಲಿ ಉಳಿಯುವ ಗರಿಷ್ಠ ಕಾಲಾವಧಿ 2011 ಅಕ್ಟೋಬರ್ 25ರವರೆಗೆ. ಆದುದರಿಂದ 1980 ಜನವರಿಯಿಂದ 2011 ಅಕ್ಟೋಬರ್ ವರೆಗೆ ಈ ಪ್ರದೇಶದಲ್ಲಿ ಜೀವಿಸಿದ ಅಥವಾ 1980 ಜನವರಿಯಿಂದ 2011 ಅಕ್ಟೋಬರ್ ವರೆಗಿನ ಭ್ರೂಣವನ್ನು ಎಂಡೋಸಲ್ಫಾನ್ ಸಂತ್ರಸ್ತ ಎಂದು ವ್ಯಾಖ್ಯಾನಿಸಲಾಗಿದೆ’’ ಎಂದು ಕರಡು ಮಾರ್ಗಸೂಚಿ ಹೇಳಿದೆ.
ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಎರಡು ಹಂತದ ವ್ಯವಸ್ಥೆಯನ್ನು ರೂಪಿಸುವ ಸಮಿತಿಯ ಶಿಫಾರಸಿಗೆ ಸರಕಾರ ಅನುಮೋದನೆ ನೀಡಿದೆ. ಸಂತ್ರಸ್ತರನ್ನು ಗುರುತಿಸಲು ತಳಮಟ್ಟದಲ್ಲಿ ಆರಂಭಿಕ ಬೇಸ್ಲೈನ್ ಸ್ಕ್ರೀನಿಂಗ್ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ವೈದ್ಯಕೀಯ ತಜ್ಞರ ಸಮಿತಿಯ ಪರಿಶೀಲನೆ ನಡೆಯಲಿದೆ.