ನಟ ಮೋಹನ್ ಲಾಲ್ ಬಳಿ ಇರುವ ಆನೆ ದಂತದ ಮಾಲೀಕತ್ವ ಪ್ರಮಾಣಪತ್ರ ರದ್ದುಗೊಳಿಸಿದ ಕೇರಳ ಹೈಕೋರ್ಟ್

ನಟ ಮೋಹನ್ ಲಾಲ್ |Photo Credit : PTI
ಕೊಚ್ಚಿ: ಮಲಯಾಳಂ ನಟ ಮೋಹನ್ ಲಾಲ್ ಬಳಿ ಇರುವ ಆನೆ ದಂತದಿಂದ ತಯಾರಿಸಿದ ವಸ್ತುಗಳಿಗೆ ಅರಣ್ಯ ಇಲಾಖೆ ನೀಡಿದ್ದ ಮಾಲೀಕತ್ವ ಪ್ರಮಾಣಪತ್ರಗಳು ಅಮಾನ್ಯ, ಅವುಗಳನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ.
ನ್ಯಾಯಮೂರ್ತಿ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರ ವಿಭಾಗೀಯ ಪೀಠ, ಫೆಬ್ರವರಿ 2015 ಮತ್ತು ಫೆಬ್ರವರಿ 2016ರಲ್ಲಿ ಈ ಕುರಿತು ರಾಜ್ಯ ಸರಕಾರ ಹೊರಡಿಸಿದ ಆದೇಶಗಳನ್ನು ಮತ್ತು ನಂತರ ಜನವರಿ ಮತ್ತು ಏಪ್ರಿಲ್ 2016ರಲ್ಲಿ ನಟನಿಗೆ ನೀಡಿದ ಮಾಲೀಕತ್ವದ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದೆ.
ವನ್ಯಜೀವಿ(ರಕ್ಷಣೆ) ಕಾಯ್ದೆ-1972ರ ಅಡಿಯಲ್ಲಿ ಶಾಸನಬದ್ಧ ಅವಶ್ಯಕತೆಗಳನ್ನು ಅನುಸರಿಸಲು ಸರಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿದೆ.
ತಮ್ಮ ಬಳಿ ಇರುವ ಎರಡು ಆನೆ ದಂತಗಳು ಮತ್ತು ದಂತ ಬಳಸಿ ಸಿದ್ಧಪಡಿಸಿದ 13 ಕಲಾಕೃತಿಗಳನ್ನು ಸೆಕ್ಷನ್ 40(4)ರ ಅಡಿಯಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ ಎದುರು ಹಾಜರುಪಡಿಸಿ ನಂತರ ಸೆಕ್ಷನ್ 42ರ ಅಡಿಯಲ್ಲಿ ಅದಕ್ಕೆ ಅನುಮತಿ ಪಡೆದಿರುವುದನ್ನು ಪ್ರಶ್ನಿಸಿ ಕೊಚ್ಚಿಯ ಎಲೂರಿನ ಕೆ.ಎ. ಪೌಲೋಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿದೆ.







