ಕೇರಳ ಹೈಕೋರ್ಟ್ ಮಹತ್ವದ ನಿರ್ಧಾರ: AI ಬಳಕೆ ಕುರಿತು ಜಿಲ್ಲಾ ನ್ಯಾಯಾಲಯಗಳಿಗೆ ಹೊಸ ನೀತಿ

Photo : PTI
ಕೊಚ್ಚಿ, ಜು.20: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳ ಉಚ್ಚ ನ್ಯಾಯಾಲಯವು ಕೃತಕ ಬುದ್ಧಿಮತ್ತೆ (AI) ಬಳಕೆ ನೀತಿಯನ್ನು ಪರಿಚಯಿಸಿದ್ದು, ಇದು ಜಿಲ್ಲಾ ನ್ಯಾಯಾಂಗದಿಂದ ನಿರ್ಧಾರವನ್ನು ತೆಗೆದುಕೊಳ್ಳಲು ಅಥವಾ ಕಾನೂನು ತಾರ್ಕಿಕತೆಗಾಗಿ AI ಸಾಧನಗಳ ಬಳಕೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆ.
AI ಸಾಧನಗಳ ಹೆಚ್ಚುತ್ತಿರುವ ಲಭ್ಯತೆ ಮತ್ತು ಪ್ರವೇಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಂಗಗಳಲ್ಲಿ AIನ ಜವಾಬ್ದಾರಿಯುತ ಮತ್ತು ನಿರ್ಬಂಧಿತ ಬಳಕೆಗಾಗಿ ಉಚ್ಚ ನ್ಯಾಯಾಲಯವು ‘ಜಿಲ್ಲಾ ನ್ಯಾಯಾಂಗದಲ್ಲಿ AI ಸಾಧನಗಳ ಬಳಕೆ ಕುರಿತು ನೀತಿ’ಯನ್ನು ಹೊರತಂದಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ನ್ಯಾಯಾಲಯದ ಮೂಲಗಳ ಪ್ರಕಾರ ಇದು ಇಂತಹ ಮೊದಲ ನೀತಿಯಾಗಿದೆ.
AI ಸಾಧನಗಳ ವಿವೇಚನಾರಹಿತ ಬಳಕೆಯು ಖಾಸಗಿತನ ಹಕ್ಕುಗಳ ಉಲ್ಲಂಘನೆ, ದತ್ತಾಂಶ ಭದ್ರತಾ ಅಪಾಯಗಳು ಮತ್ತು ನ್ಯಾಯಾಂಗದ ತೀರ್ಪುಗಳು ವಿಶ್ವಾಸ ಕಳೆದುಕೊಳ್ಳುವಿಕೆ ಸೇರಿದಂತೆ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು. ಹೀಗಾಗಿ ತೀವ್ರ ಎಚ್ಚರಿಕೆ ವಹಿಸುವಂತೆ ಉಚ್ಚ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯಗಳಿಗೆ ಸೂಚಿಸಿದೆ.
AI ಸಾಧನಗಳನ್ನು ಜವಾಬ್ದಾರಿಯುತ ರೀತಿಯಲ್ಲಿ, ಕೇವಲ ಸಹಾಯಕ ಪರಿಕರವನ್ನಾಗಿ ಮತ್ತು ಕಟ್ಟುನಿಟ್ಟಾಗಿ ಅನುಮತಿಸಲಾದ ಉದ್ದೇಶಕ್ಕೆ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಯಾವುದೇ ಸಂದರ್ಭಗಳಲ್ಲಿ ನಿರ್ಧಾರವನ್ನು ಕೈಗೊಳ್ಳಲು ಅಥವಾ ಕಾನೂನು ತಾರ್ಕಿಕತೆಗೆ ಬದಲಿಯಾಗಿ AI ಸಾಧನಗಳನ್ನು ಬಳಸಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ನೀತಿಯ ಗುರಿಯಾಗಿದೆ ಎಂದು ನೀತಿ ದಾಖಲೆಯಲ್ಲಿ ಹೇಳಲಾಗಿದೆ.
ವಿಶೇಷವಾಗಿ, ನ್ಯಾಯಾಂಗ ನಿರ್ಧಾರವನ್ನು ಕೈಗೊಳ್ಳುವ ಎಲ್ಲ ಹಂತಗಳಲ್ಲಿ ಮಾನವ ಮೇಲ್ವಿಚಾರಣೆ, ಪಾರದರ್ಶಕತೆ, ನ್ಯಾಯಸಮ್ಮತತೆ, ಗೋಪ್ಯತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳುವ ತಮ್ಮ ನೈತಿಕ ಮತ್ತು ಕಾನೂನು ಬಾಧ್ಯತೆಗಳನ್ನು ಪೂರೈಸುವಲ್ಲಿ ನ್ಯಾಯಾಂಗದ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ನೆರವಾಗುವ ಉದ್ದೇಶವನ್ನೂ ಈ ನೀತಿಯು ಹೊಂದಿದೆ ಎಂದು ಹೇಳಲಾಗಿದೆ.







