ಕೇರಳ ಹಿಜಾಬ್ ವಿವಾದ | ಶಾಲಾಡಳಿತದಿಂದ ಬೆದರಿಕೆ: ಕೇರಳ ಶಿಕ್ಷಣ ಸಚಿವ

ವಿ. ಶಿವನ್ಕುಟ್ಟಿ | Photo Credit : X \ @VSivankuttyCPIM
ತಿರುವನಂತಪುರಂ, ಅ. 16: ಹಿಜಾಬ್ಧಾರಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ಆರೋಪ ಎದುರಿಸುತ್ತಿರುವ ಶಾಲೆಯು, ವಿಷಯವನ್ನು ರಾಜಕೀಕರಣಗೊಳಿಸಲು ಉದ್ದೇಶಪೂರ್ವಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಗುರುವಾರ ಆರೋಪಿಸಿದ್ದಾರೆ.
ಕೋಮು ವಿಭಜನೆಗಳನ್ನು ಸೃಷ್ಟಿಸುವ ಪ್ರಯತ್ನಗಳನ್ನು ಕೇರಳ ಸರಕಾರ ಸಹಿಸುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವನ್ಕುಟ್ಟಿ ಹೇಳಿದರು.
ಕೊಚ್ಚಿಯಲ್ಲಿರುವ ಚರ್ಚ್ ಆಡಳಿತದ ಶಾಲೆಯೊಂದರಲ್ಲಿ ಹಿಜಾಬ್ ಧರಿಸಲು ಎಂಟನೇ ತರಗತಿ ಬಾಲಕಿಯೊಬ್ಬಳಿಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಾದ ತಲೆದೋರಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ, ಹೆತ್ತವರೊಂದಿಗೆ ವಿವಾದ ಏರ್ಪಟ್ಟ ಬಳಿಕ ಆಡಳಿತ ಮಂಡಳಿಯು ಶಾಲೆಗೆ ಎರಡು ದಿನಗಳ ರಜೆ ಘೋಷಿಸಿತ್ತು.
ಘಟನೆಯ ಬಳಿಕ, ವಿದ್ಯಾರ್ಥಿನಿಗೆ ತನ್ನ ಶಿಕ್ಷಣವನ್ನು ಮುಂದುವರಿಸಲು ಅವಕಾಶ ನೀಡುವಂತೆ ಶಾಲೆಗೆ ನಿರ್ದೇಶನ ನೀಡಲಾಗಿತ್ತು ಎಂದು ಶಿವನ್ಕುಟ್ಟಿ ಹೇಳಿದರು. ವಿದ್ಯಾರ್ಥಿನಿ ಮತ್ತು ಆಕೆಯ ಹೆತ್ತವರು ಅನುಭವಿಸಿದ ಭಾವನಾತ್ಮಕ ಒತ್ತಡವನ್ನು ನಿವಾರಿಸುವಂತೆಯೂ ಶಾಲಾಡಳಿತಕ್ಕೆ ತಿಳಿಸಲಾಗಿತ್ತು.
ಶಾಲೆಯು ಸರಕಾರವನ್ನು ನಕಾರಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಮತ್ತು ಹಿಜಾಬ್ ವಿವಾದವನ್ನು ರಾಜಕೀಕರಣಗೊಳಿಸುತ್ತಿದೆ ಎಂದು ವಿವಾದದ ಕೆಲವು ದಿನಗಳ ಬಳಿಕ ಕೇರಳ ಶಿಕ್ಷಣ ಸಚಿವರು ಆರೋಪಿಸಿದ್ದಾರೆ.
‘‘ಸರಕಾರವು ತನ್ನ ನಿಲುವನ್ನು ನಿನ್ನೆ ಸ್ಪಷ್ಟಪಡಿಸಿದೆ. ಶಾಲಾ ಆಡಳಿತವು ವಿಷಯವನ್ನು ರಾಜಕೀಕರಣಗೊಳಿಸಲು ಯತ್ನಿಸುತ್ತಿದೆ. ನಿನ್ನೆ ಸರಕಾರದ ನಿಲುವನ್ನು ಸ್ಪಷ್ಟಪಡಿಸಿದಾಗ ಶಾಲಾ ಆಡಳಿತದ ಕಡೆಯಿಂದ ಬೆದರಿಕೆಗಳನ್ನು ಹಾಕಲಾಗಿತ್ತು. ಅವರು ಸರಕಾರವನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿದ್ದಾರೆ’’ ಎಂದು ಶಿವನ್ಕುಟ್ಟಿ ಹೇಳಿದರು.
ಕೋಮು ವಿಭಜನೆಯನ್ನು ಸೃಷ್ಟಿಸುವ ಯಾವುದೇ ಪ್ರಯತ್ನವನ್ನು ರಾಜ್ಯ ಸರಕಾರ ಸಹಿಸುವುದಿಲ್ಲ ಎಂದು ಅವರು ಹೇಳಿದರು. ‘‘ಕಾನೂನು ತನ್ನದೇ ಹಾದಿಯಲ್ಲಿ ನಡೆಯಲಿದೆ’’ ಎಂದರು.







