ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಯುಡಿಎಫ್ ಸ್ಪಷ್ಟ ಮೇಲುಗೈ

Photo credit: mathrubhumi.com
ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳು ರಾಜ್ಯದ ರಾಜಕೀಯದಲ್ಲಿ ಮಹತ್ವದ ತಿರುವನ್ನು ಸೂಚಿಸಿವೆ. ವಿರೋಧ ಪಕ್ಷವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಕಾರ್ಪೊರೇಷನ್, ಪುರಸಭೆ ಹಾಗೂ ಪಂಚಾಯತ್ಗಳಾದ್ಯಂತ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ತನ್ನ ಹಲವು ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಹಿನ್ನಡೆ ಅನುಭವಿಸಿದೆ.
2026ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ದಿಕ್ಸೂಚಿ ಎಂದು ಪರಿಗಣಿಸಲಾಗುತ್ತಿರುವ ಈ ಫಲಿತಾಂಶಗಳು, ಬಿಜೆಪಿ ನೇತೃತ್ವದ ಎನ್ಡಿಎಗೆ ಸೀಮಿತ ಆದರೆ ಗಮನಾರ್ಹ ಪಲಿತಾಂಶ ನೀಡಿದೆ. ವಿಶೇಷವಾಗಿ ತಿರುವನಂತಪುರಂನಂತಹ ನಗರ ಪ್ರದೇಶಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಡಿ. 9 ಮತ್ತು 11ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಆರು ಕಾರ್ಪೊರೇಷನ್, 14 ಜಿಲ್ಲಾ ಪಂಚಾಯತ್, 87 ಪುರಸಭೆ, 152 ಬ್ಲಾಕ್ ಪಂಚಾಯತ್ ಹಾಗೂ 941 ಗ್ರಾಮ ಪಂಚಾಯತ್ಗಳಿಗೆ ಮತದಾನ ನಡೆದಿತ್ತು.
ಕಾರ್ಪೊರೇಷನ್ ಫಲಿತಾಂಶ:
ಆರು ಕಾರ್ಪೊರೇಷನ್ಗಳಲ್ಲಿ ನಾಲ್ಕನ್ನು ಯುಡಿಎಫ್ ತನ್ನದಾಗಿಸಿಕೊಂಡಿದೆ. ಕೊಲ್ಲಂ, ಕೊಚ್ಚಿ, ತ್ರಿಶೂರ್ ಹಾಗೂ ಕಣ್ಣೂರಿನಲ್ಲಿ ಯುಡಿಎಫ್ ಗೆಲುವು ದಾಖಲಿಸಿದ್ದು, ನಗರ ಪ್ರದೇಶಗಳಲ್ಲಿ ಎಲ್ಡಿಎಫ್ ಹಿಡಿತಕ್ಕೆ ದೊಡ್ಡ ಹೊಡೆತ ನೀಡಿದೆ. ಬಿಜೆಪಿ ನೇತೃತ್ವದ ಎನ್ಡಿಎ ತಿರುವನಂತಪುರಂ ಕಾರ್ಪೊರೇಷನ್ ಗೆಲ್ಲುವ ಮೂಲಕ ರಾಜಕೀಯವಾಗಿ ಮಹತ್ವದ ಸಾಧನೆ ಮಾಡಿದೆ. ಯುಡಿಎಫ್ ಮತ್ತು ಎನ್ಡಿಎಗಳಿಂದ ತೀವ್ರ ಸವಾಲು ಎದುರಿಸಿದರೂ, ಕೋಝಿಕ್ಕೋಡ್ ಕಾರ್ಪೊರೇಷನ್ನಲ್ಲಿ ಮಾತ್ರ ಎಲ್ಡಿಎಫ್ ತನ್ನ ಹಿಡಿತವನ್ನು ಉಳಿಸಿಕೊಂಡಿದೆ.
ಪುರಸಭೆ–ಪಂಚಾಯತ್ಗಳಲ್ಲಿ ಯುಡಿಎಫ್ ಸ್ಥಾನಗಳಲ್ಲಿ ಹೆಚ್ಚಳ:
ಪುರಸಭಾ ಮಟ್ಟದಲ್ಲಿಯೂ ಯುಡಿಎಫ್ ಸ್ಪಷ್ಟ ಮುನ್ನಡೆ ಸಾಧಿಸಿದೆ. 87 ಪುರಸಭೆಗಳ ಪೈಕಿ 54ರಲ್ಲಿ ಯುಡಿಎಫ್ ಜಯಗಳಿಸಿದ್ದು, ನಗರ ಹಾಗೂ ಅರೆನಗರ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದೆ. ಎರ್ನಾಕುಲಂ, ಆಲಪ್ಪುಳ, ಮಲಪ್ಪುರಂ, ಕೊಟ್ಟಾಯಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳ ಹಲವು ಪುರಸಭೆಗಳಲ್ಲಿ ಯುಡಿಎಫ್ ಮೇಲುಗೈ ಸಾಧಿಸಿದೆ. ಪತ್ತನಂತಿಟ್ಟ ಮತ್ತು ಇಡುಕ್ಕಿಯಲ್ಲಿಯೂ ಯುಡಿಎಫ್ ತನ್ನ ಛಾಪನ್ನು ಮರಳಿ ಪಡೆದಿದೆ.
ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಸೇರಿದಂತೆ ಕೆಲವು ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಎಲ್ಡಿಎಫ್ ಜಯ ಸಾಧಿಸಿದರೂ, ಒಟ್ಟಾರೆ 2020ರ ಸಾಧನೆಗೆ ಹೋಲಿಸಿದರೆ ಸ್ಪಷ್ಟ ಹಿನ್ನಡೆ ಕಂಡಿದೆ. ಪಾಲಕ್ಕಾಡ್ ಪುರಸಭೆಯನ್ನು ಉಳಿಸಿಕೊಳ್ಳುವ ಮೂಲಕ ಹಾಗೂ ತ್ರಿಪುಣಿತುರವನ್ನು ಗೆಲ್ಲುವ ಮೂಲಕ ಎನ್ಡಿಎ ಅಲ್ಪ ಆದರೆ ಗಮನಾರ್ಹ ಮುನ್ನಡೆ ದಾಖಲಿಸಿದೆ. ತೋಡುಪುಳ ಮತ್ತು ಕಾಙಂಗಾಡ್ ನಂತಹ ನಿಕಟ ಕ್ಷೇತ್ರಗಳಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ವಹಿಸಿದೆ.
ಒಟ್ಟಾರೆ, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳು ಯುಡಿಎಫ್ ಪುನಶ್ಚೇತನದ ಸಂಕೇತವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಕೇರಳದ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ.







