ಕುವೈತ್ ನಲ್ಲಿ ಭೀಕರ ಕುವೈತ್ ಅಗ್ನಿ ದುರಂತ | ನೀರಿನ ತೊಟ್ಟಿಗೆ ಹಾರಿ ಬದುಕುಳಿದ ಕೇರಳದ ನಳಿನಾಕ್ಷನ್
PC : ANI
ಕೊಚ್ಚಿ: ಕುವೈತ್ನಲ್ಲಿ ನಡೆದ ಬೀಕರ ಅಗ್ನಿ ದುರಂತದಲ್ಲಿ ಕೇರಳದ ನಳಿನಾಕ್ಷನ್ ನೀರಿನ ತೊಟ್ಟಿಗೆ ಹಾರಿ ಪವಾಡಸದೃಷವಾಗಿ ಬದುಕುಳಿದ ಘಟನೆ ವರದಿಯಾಗಿದೆ.
ಕುವೈತ್ನ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 40 ಭಾರತೀಯರು ಮೃತಪಟ್ಟಿದ್ದಾರೆ. ಅದರಲ್ಲಿ 21 ಮಂದಿ ಕೇರಳ ಮೂಲದವರು ಎಂದು ಸಿಎಂ ಪಿಣರಾಯಿ ದೃಢಪಡಿಸಿದ್ದಾರೆ.
ಈ ಅವಘಡದ ನಡುವೆಯೇ ನಳಿನಾಕ್ಷನ್ ತೋರಿದ ಧೈರ್ಯವು ಅವರ ಜೀವ ಉಳಿಸಿದೆ. ಅವಘಡ ಸಂಭವಿಸಿದಾಗ ಕಟ್ಟಡದ ಮೂರನೇ ಮಹಡಿದಲ್ಲಿ ಸಿಲುಕಿಕೊಂಡಿದ್ದ ನಳಿನಾಕ್ಷನ್, ಬೆಂಕಿಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲಿಯೇ ಇದ್ದ ನೀರಿನ ಟ್ಯಾಂಕ್ಗೆ ಜಿಗಿದಿದ್ದಾರೆ. ಅವರು ಜಿಗಿದಿದ್ದನ್ನು ನೋಡಿದ ಪಕ್ಕದ ಅಪಾರ್ಟ್ಮೆಂಟ್ ನಲ್ಲಿದ್ದ ನಳಿನಾಕ್ಷನ್ ಸಂಬಂಧಿಕರು, ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಳಿನಾಕ್ಷನ್ ಬಾಯಿಯಿಂದ ರಕ್ತ ಸುರಿಯುತ್ತಿತ್ತು, ತಕ್ಷಣವೇ ಅವರನ್ನು ಹತ್ತಿರದ ತುರ್ತು ಚಿಕಿತ್ಸಾ ಘಟಕಕ್ಕೆ ಸಂಬಂಧಿಕರು ದಾಖಲಿಸಿದ್ದರಿಂದ ಜೀವ ಉಳಿದಿದೆ. ಅವರೀಗ ಚೇತರಿಕೊಳ್ಳುತ್ತಿದ್ದಾರೆ ಎಂದು ನಳಿನಾಕ್ಷನ್ ಚಿಕ್ಕಪ್ಪ ಬಾಲಕೃಷ್ಣನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.